Karavali
ಕಾಸರಗೋಡು: ಹಾಟ್ ಸ್ಪಾಟ್ ವಲಯ ಹೊರತುಪಡಿಸಿ ವಿನಾಯಿತಿ ಪ್ರಕಟಿಸಿದ ಜಿಲ್ಲಾಧಿಕಾರಿ
- Tue, May 05 2020 04:58:47 PM
-
ಕಾಸರಗೋಡು,ಮೇ 5 (Daijiworld News/MSP): ಹಾಟ್ ಸ್ಪಾಟ್ ಗಳಲ್ಲದೇ ಇರುವ ವಲಯಗಳಲ್ಲಿ ವಿನಾಯಿತಿಗಳನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಘೋಷಿಸಿದ್ದಾರೆ. ರಾಜ್ಯ ಸರಕಾರದ ನೂತನ ಆದೇಶಗಳ ಪ್ರಕಾರ ಜಿಲ್ಲೆಯನ್ನು ಆರೆಂಜ್ ಝೋನ್ ನಲ್ಲಿ ಅಳವಡಿಸಿರುವ ಹಿನ್ನೆಲೆಯಲ್ಲಿ ಈ ವಿನಾಯಿತಿಗಳನ್ನು ಪ್ರಕಟಿಸಿದ್ದಾರೆ.
ಸೋಮವಾರ : ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಮಾರಾಟ ನಡೆಸುವ ಅಂಗಡಿಗಳು(ಹಾರ್ಡ್ ವೇರ್ಸ್, ಸಾನಿಟರಿ ವೇರ್ಸ್, ಟೈಲ್ಸ್ ಇತ್ಯಾದಿ), ಗೂಡ್ಸ್ ಕೆರೆಯರ್ ವಾಹನಗಳು, ಮೊಬೈಲ್ ಅಂಗಡಿಗಳು, ಕಂಪ್ಯೂಟರ್ ಮಾರಾಟ-ಸರ್ವೀಸ್ ನಡೆಸುವ ಅಂಗಡಿಗಳು, ಬೀಡಿ ಕಂಪನಿ, ಫ್ರಿಜ್, ವಾಷಿಂಗ್ ಮೆಷಿನ್, ಎ.ಸಿ., ಫ್ಯಾನ್ ಇತ್ಯಾದಿಗಳ ಮಾರಾಟ- ಸರ್ವೀಸ್, ಚಪ್ಪಲಿ ಅಂಗಡಿ ಇತ್ಯಾದಿಗಳನ್ನು ತೆರೆದು, ಶಟರ್ ಮುಚ್ಚಿ ಶುಚೀಕರಣ ನಡೆಸುವ ಚಟುವಟಿಕೆಗಳಿಗೆ ಮಾತ್ರ ಅನುಮತಿಯಿದೆ.
ಮಂಗಳವಾರ: ಬೀಡಿ ಕಂಪನಿ, ಪುಸ್ತಕ ಅಂಗಡಿ, ಸ್ಟುಡಿಯೋ, ಪ್ರಿಂಟಿಂಗ್ ಪ್ರೆಸ್ ಗಳನ್ನು ಶುಚೀಕರಣ ನಡೆಸಿದ ನಂತರ ತೆರೆಯಬಹುದು.
ಬುಧವಾರ: ಧ್ವನಿ-ಬೆಳಕು ಸಾಮಾಗ್ರಿಗಳನ್ನು ಬಾಡಿಗೆಗೆ ನೀಡುವ ಸಂಸ್ಥೆಗಳನ್ನು ಶುಚೀಕರಿಸಿದ ನಂತರವಷ್ಟೇ ತೆರೆಯಬಹುದು. ಯಾವ ವಿಧದಲ್ಲೂ ವ್ಯವಹಾರ ನಡೆಸಕೂಡದು.
ಗುರುವಾರ: ವರ್ಕ್ ಶಾಪ್ ಗಳು, ವಾಹನಗಳ ಬಿಡಿಭಾಗಗ ಮಾರಾಟ ಅಂಗಡಿ, ಚಿಪ್ಪಿನಿಂದ ಕುಮ್ಮಾಯ ನಿರ್ಮಿಸುವ ಘಟಕಗಳು, ಹರಿತ ಕ್ರಿಯಾ ಸೇನೆಗಾಗಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಚಟುವಟಿಕೆ ನಡೆಸಬಹುದು.
ಶುಕ್ರವಾರ: ಪುಸ್ತಕದ ಅಂಗಡಿಗಳನ್ನು ತೆರೆಯಬಹುದು.
ಶನಿವಾರ: ಗೂಡ್ಸ್ ಕೆರೆಯರ್ ವಾಹನಗಳು, ನಿರ್ಮಾಣ ಸಾಮಾಗ್ರಿ ಮಾರಾಟ ನಡೆಸುವ ಅಂಗಡಿಗಳು(ಹಾರ್ಡ್ ವೇರ್ಸ್, ಸಾನಿಟರಿ ವೇರ್ಸ್, ಟೈಲ್ಸ್ ಇತ್ಯಾದಿ), ಬಟ್ಟೆ ಅಂಗಡಿಗಳು ಇತ್ಯಾದಿ ಶಟರ್ ಮುಚ್ಚಿ ಶುಚೀಕರಣ ನಡೆಸಲು ಮಾತ್ರ ಅನುಮತಿಯಿದೆ. ವ್ಯವಹಾರ ನಡೆಸುವಂತಿಲ್ಲ. ಮೊಬೈಲ್ ಅಂಗಡಿ, ಕಂಪ್ಯೂಟರ್ ಮಾರಾಟ-ದುರಸ್ತಿ ಅಂಗಡಿಗಳು ತೆರೆಯಬಹುದು.ನಿಬಂಧನೆಗಳ ಅನ್ವಯ ವಾಹನ ಸಂಚಾರ
ಹಾಟ್ ಸ್ಪಾಟ್ ಗಳಲ್ಲದೇ ಇರುವ ಪ್ರದೇಶಗಳ ವಿನಾಯಿತಿ ಮಂಜೂರು ಮಾಡಿರುವ ಕೃಷಿ ವಲಯ, ಕಟ್ಟಡ ನಿರ್ಮಾಣ ವಲಯ, ಅನಿವಾರ್ಯ ಸೇವೆ ಸಹಿತ ಚಟುವಟಿಕೆಗಳಿಗಾಗಿ ವಾಹನಗಳನ್ನು ನಿಬಂಧನೆಗಳ ಅನ್ವಯ ಸಂಚಾರ ನಡೆಸಬಹುದು.
ಸಂಚಾರದ ಅಗತ್ಯವನ್ನು ಖಚಿತಪಡಿಸುವ ಸತ್ಯವಾಙ್ಮೂಲ ಕಡ್ಡಾಯವಾಗಿ ಇರಿಸಿಕೊಳ್ಳಬೇಕು. ಸೋಮ, ಬುಧ, ಶುಕ್ರವಾರ ಗಳಲ್ಲಿ ಸಮಸಂಖ್ಯೆಯಲ್ಲಿ ಕೊನೆಗೊಳ್ಳುವ ಸಂಖ್ಯೆ ನೋಂದಣಿ ಹೊಂದಿರುವ ಖಾಸಗಿ ವಾಹನಗಳನ್ನು ರಸ್ತೆಗಿಳಿಸಿರಬಹುದು. ಮಂಗಳ, ಗುರು, ಶನಿ ವಾರಗಳಂದು ವಿಷಮ ಸಂಖ್ಯೆ ಕೊನೆಯಲ್ಲಿ ಹೊಂದಿರುವ ನೋಂದಣಿ ಸಂಖ್ಯೆಯ ಖಾಸಗಿ ವಾಹನಗಳನ್ನು ರಸ್ತೆ ಗಿಳಿಸಬಹುದು. ಟ್ಯಾಕ್ಸಿ ಕ್ಯಾಬ್ ಗಳಲ್ಲಿ ಒಬ್ಬ ಚಾಲಕ,ಇಬ್ಬರು ಪ್ರಯಾಣಿಕರು ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಸಂಚಾರ ನಡೆಸಬಹುದು. ಆಟೋರಿಕ್ಷಾ ಸಂಚಾರಕ್ಕೆ ಅನುಮತಿಯಿಲ್ಲ. ಶನಿ, ಸೋಮವಾರಗಳಲ್ಲಿ ಸಂಚಾರಕ್ಕೆ ಅನುಮತಿನೀಡಲಾದ ಗೂಡ್ಸ್ ಕೆರಿಯರ್ ವಾಹನಗಳಿಗೆ ನೋಂದಣಿ ಸಂಖ್ಯೆಯ ಕೊನೆಯಲ್ಲಿ ಸಮ, ವಿಷಮಸಂಖ್ಯೆಗಳ ಕಡ್ಡಾಯ ಅನ್ವಯಿಸುವುದಿಲ್ಲ. ಅನಿವಾರ್ಯ ಸಂಚಾರಗಳಿಗೆ ಪಾಸ್/ಅನುಮತಿ ಲಭಿಸಿರುವ ಇತರ ವಾಹನಗಳು ಶನಿ, ಭಾನುವಾರಗಳಲ್ಲಿ ಸಂಚಾರ ನಡೆಸಬಹುದು.
ರಾಜ್ಯ ಸರಕಾರದ ಆದೇಶ ಪ್ರಕಾರ ಅನಿವಾರ್ಯ ಸೇವೆಗಳಿಗೆ ಚಟುವಟಿಕೆ ನಡೆಸುವ ಕಚೇರಿಗಳಿಗೆ ತೆರಳುವ ಸಿಬ್ಬಂದಿಯ ವಾಹನಗಳಿಗೆ ನೋಂದಣಿ ಸಂಖ್ಯೆಯಲ್ಲಿ ಸಮ, ವಿಷಮ ಸಂಖ್ಯೆಗಳ ಕಡ್ಡಾಯ ಅನ್ವಯಿಸುವುದಿಲ್ಲ. ಸಿಬ್ಬಂದಿಗೆ ಗುರುತುಚೀಟಿ ಇರುವುದರಿಂದ ಸತ್ಯವಾಙ್ಮೂಲ ಅಗತ್ಯವಿಲ್ಲ.
ಸರಕಾರಿ ಕಚೇರಿಗಳಿಗೆ ಶನಿವಾರ ರಜೆ: ರಾಜ್ಯ ಸರಕಾರದ ಆದೇಶ ಪ್ರಕಾರ ಎಲ್ಲ ಸರಕಾರಿ ಕಚೇರಿಗಳು ಚಟುವಟಿಕೆ ನಡೆಸಬೇಕು. ಅನಿವಾರ್ಯ ಸೇವೆಗಳಲ್ಲದ ಸರಕಾರಿ ಕಚೇರಿಗಳಲ್ಲಿ ಗ್ರೂಪ್ ಎ ಮತ್ತು ಬಿ ಸಿಬ್ಬಂದಿ ಶೇ 50, ಗ್ರೂಪ್ ಸಿ ಮತ್ತು ಡಿ ಸಿಬ್ಬಂದಿ ಶೇ 33 ಕಚೇರಿಗೆ ಹಾಜರಾಗಬೇಕು. ಲಾಕ್ ಡೌನ್ ಆದೇಶ ಜಾರಿಯಲ್ಲಿರುವವರೆಗೆ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಿಗೆ ಶನಿವಾರ ರಜೆಯಿರುವುದು.
ನಡೆಸಬಹುದಾದ ಚಟುವಟಿಕೆಗಳು:
ಹಾಟ್ ಸ್ಪಾಟ್ ಗಳಲ್ಲದೇ ಇರುವ ಪ್ರದೇಶಗಳಲ್ಲಿ (ಭಾನುವಾರ ಹೊರತು ಪಡಿಸಿ) ಎಲ್ಲ ದಿನ ನಡೆಸಬಹುದಾದ ಚಟುವಟಿಕೆಗಳು ಇಂತಿವೆ. ಕೃಷಿ ವಲಯಗಳ ಚಟುವಟಿಕೆಗಳು, ಸರಕಾರ ವಲಯಗಲಲ್ಲಿ ಅಂತಿಮ ಹಂತದಲ್ಲಿರುವ ಕಟ್ಟಡ ನಿರ್ಮಾಣ ಚಟುವಟಿಕೆಗಳು.(ನೂತನ ಕಟ್ಟಡ ನಿರ್ಮಾಣ ನಡೆಸುವಂತಿಲ್ಲ.), ನೀರಾವರಿ, ಜಲಪ್ರಾಧಿಕಾರ ವ್ಯಾಪ್ತಿಯಲ್ಲಿ ನಿಗದಿ ಪಡಿಸಲಾದ ಅವಧಿಯಲ್ಲಿ ಪೂರ್ತಿಗೊಳಿಸಬೇಕಾದ ನಿರ್ಮಾಣ ಚಟುವಟಿಕೆಗಳು, ಸಾರ್ವಜನಿಕ ಆಸ್ತಿ ನಿರ್ಮಾಣ, ಪುನರ್ ನಿರ್ಮಾ ಣಕ್ಕೆ ಮಾತ್ರವಿರುವ ನೌಕರಿ ಖಾತರಿ ಯೋಜನೆಯ ಚಟುವಟಿಕೆಗಳು(5 ಮಂದಿಯ ಗುಂಪು ಮಾತ್ರ ನಡೆಸಬೇಕಾದ ಎಲ್ಲ ಮಾನದಂಡಗಳನ್ನು ಬಳಸಬೇಕು.), ಅಂತಿಮ ಹಂತದಲ್ಲಿರುವ ಖಾಸಗಿ ಭವನಗಳನಿರ್ಮಾಣ ಪೂರ್ತೀ ಕರಣದ ಚಟುವಟಿಕೆಗಳು, ಈ ಸಂಬಂಧ ಬಡಗಿ ಕಾಯಕಗಳು(ಮರದ ಕೆಲಸಗಳು.) ಚಟುವಟಿಕೆ ನಡೆಸಬಹುದು. ಆದರೆ ಪೀಠೋಪಕರಣಗಳ ಘಟಕಗಳ ಚಟುವಟಿಕೆ ಸಲ್ಲದು. ಮರದ ಮಿಲ್ಲುಗಳು, ಪ್ಲೈ ವುಡ್ ಸಂಸ್ಥೆಗಳು, ಅಲ್ಯುಮಿನಿಯಂ ಫ್ಯಾಬ್ರಿಕೇಷನ್, ಇಂಜಿನಿಯರಿಂಗ್ ವರ್ಕ್ಸ್(ವೆಲ್ಡಿಂಗ್) ಇತ್ಯಾದಿಗಳನ್ನು ನಿಗದಿ ಪಡಿಸಲಾದ ಸಿಬ್ಬಂದಿಗಳನ್ನು ಬಳಸಿ, ಕೋವಿಡ್ ಸುರಕ್ಷಾ ಕಟ್ಟುನಿಟ್ಟುಗಳ ಅನ್ವಯ ಚಟುವಟಿಕೆ ನಡೆಸಬಹುದು. ಮೀನುಗಾರಿಕೆ, ತ್ಯಾಜ್ಯ ಸಂಸ್ಕರಣೆ, ಅಕ್ಷಯ ಕೇಂದ್ರಗಳು (ಹವಾನಿಯಂತ್ರಿತ ವ್ಯವಸ್ಥೆಗಳಿಲ್ಲದೆ, ಏಕಕಾಲಕ್ಕೆ ಒಬ್ಬರು ಮಾತ್ರ ಕಚೇರಿಯೊಳಗೆ ಪ್ರವೇಶಿಸುವ ರೀತಿ) ಚಟುವಟಿಕೆ ನಡೆಸಬಹುದು. ಅಂಗೀಕಾರ ಹೊಂದಿರುವ ಕರ್ಗಲ್ಲ ಕೋರೆಗಳು, ಕ್ರಷರ್ ಗಳು ಕಾರ್ಯಾಚರಿಸಬಹುದು.
ಹಾಟ್ ಸ್ಪಾಟ್ ಗಳಲ್ಲದ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಡುಗೆ ಮಾಡಿ ಆಹಾರವನ್ನು ಆಯಾ ಪಂಚಾಯತ್/ ನಗರಸಭೆ ಪ್ರದೇಶಗಳಲ್ಲಿ ಮಾತ್ರ ಕಟ್ಟುನಿಟ್ಟುಗಳನ್ನು ಪಾಲಿಸಿ ಹೋಂ ಡೆಲಿವರಿ ನಡೆಸಬಹುದು. ಸರಕಾರಿ ನಿಬಂಧನೆಗಳನ್ನು ಪಾಲಿಸಿ ವಿವಾಹ, ಮರಣೋತ್ತರ ಕಾರ್ಯಕ್ರಮ ಗಳನ್ನು ಗರಿಷ್ಠ 20 ಮಂದಿ ಭಾಗವಹಿಸುವಂತೆ ನಡೆಸಬಹುದು. ಸಾರ್ವಜನಿಕ ಕೇಂದ್ರಗಳನ್ನು (ಆರಾಧನಾಲಯಗಳನ್ನು) ಹೊರತುಪಡಿಸಿ ಕಾರ್ಯಕ್ರಮ ನಡೆಸಬಹುದಾಗಿದೆ. ಎಲ್ಲ ಚಟುವಟಿಕೆಗಳನ್ನೂ ಸರಕಾರದ ನಿಬಂಧೆಗಳಿಗೆ ಅನ್ವಯವಾಗಿ ಮಾತ್ರ ಅನುಮತಿ ನೀಡಲಾಗುವುದು.
ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಯಾವುದೇ ವಿನಾಯಿತಿಗಳಿಲ್ಲ:
ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಯಾವುದೇ ವಿನಾಯಿತಿಗಳಿಲ್ಲ. ಲಾಕ್ ಡೌನ್ ಆದೇಶದ ಕಟ್ಟುನಿಟ್ಟುಗಳು ಕಡ್ಡಾಯವಾಗಿ ಮುಂದುವರಿಯಲಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಭಾನುವಾರ ಪೂರ್ಣ ರೂಪದ ಲಾಕ್ ಡೌನ್ ಆಗಿದ್ದು, ಜಿಲ್ಲೆಯಲ್ಲಿ ಯಾವ ಸಂಸ್ಥೆಗಳೂ, ಅಂಗಡಿಗಳೂ ಚಟುವಟಿಕೆ ನಡೆಸುವಂತಿಲ್ಲ. ವಾಹನಗಳೂ ಸಂಚಾರ ನಡೆಸಕೂಡದು ಎಂದವರು ಹೇಳಿದ್ದಾರೆ
ಅನುಮತಿ ಇರುವ ಎಲ್ಲ ಚಟುವಟಿಕೆಗಳೂ ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ ನಡೆಸಬಹುದು. ಈ ಸಂಸ್ಥೆಗಳ ಮಾಲೀಕರು, ಸಹಾಯಕರು ಕಡ್ಡಾಯವಾಗಿ ಗುರುತುಚೀಟಿ ಜೊತೆಗೆ ಇರಿಸಿಕೊಳ್ಳಬೇಕು. ಪೊಲೀಸರು ಬಯಸಿದಲ್ಲಿ ಪರಿಶೀಲನೆಗೆ ಗುರುತುಚೀಟಿ ಹಾಜರುಪಡಿಸಬೇಕು. ಮಂಜೂರಾತಿ ನೀಡಲಾದ ಚಟುವಟಿಕೆಗಳಿಗೆ ಪ್ರತ್ಯೇಕ ಪಾಸ್ ಗಳ ಅಗತ್ಯವಿಲ್ಲ. ಈ ಸಂಬಂಧ ಸಂಸ್ಥೆಗಳ ಸೇವೆ ಅಗತ್ಯವಿರುವ ವ್ಯಕ್ತಿಗಳು ಸತ್ಯವಾಙ್ಮೂಲ ಜತೆಗಿರಿಸಿಕೊಂಡಿರಬೇಕು. ಪೊಲೀಸರು ಬಯಸಿದಲ್ಲಿ ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಟ್ಟುನಿಟ್ಟು ಮೀರಿದರೆ ಕಠಿನ ಕಾನೂನು ಕ್ರಮ: ಎಸ್ಪಿ
ಕೊರೊನ ಸೋಂಕು ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 144 ಸಿ.ಆರ್.ಪಿ.ಸಿ. ಪ್ರಕಾರದ ನಿಷೇದಾಜ್ಞೆ ಜಾರಿಯಲ್ಲಿದೆ. ಈ ಕಾರಣದಿಂದ ಜಿಲ್ಲೆಯ ಹಾಟ್ ಸ್ಪಾಟ್ ವಲಯಗಳಲ್ಲಿ ಕಟ್ಟುನಿಟ್ಟು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ತಿಳಿಸಿದರು. ಜಾರಿಯಲ್ಲಿರುವ ಕಟ್ಟಿನಿಟ್ಟುಗಳನ್ನು ಉಲ್ಲಂಘಿಸಿ ಅನೇಕ ಮಂದಿ ಮನೆಗಳಿಂದ ಹೊರಗಿಳಿಯುತ್ತಿರುವುದು ಗಮನಕ್ಕೆ ಬಂದಿದೆ. ಕಟ್ಟುನಿಟ್ಟು ಮೀರಿ ಮನೆಗಳಿಂದ ಹೊರಗಿಳಿಯುವವರ ವಿರುದ್ಧ ಕೇಸು ದಾಖಲು, ವಾಹನಗಳ ವಶ ಸಹಿತ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ