ಮಂಗಳೂರು, ಮೇ 06 (Daijiworld News/MB) : ಕೊರೊನಾ ಸೋಂಕಿತರ ನೇರ ಸಂಪರ್ಕಿತರ ಗಂಟಲಿನ ದ್ರವದ ಮಾದರಿಗಳ ಪರೀಕ್ಷೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಳಂಬವಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ದೂರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇನ್ನು ಎರಡು ದಿನಗಳಿಂದ ಜಿಲ್ಲೆಯ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯುತ್ತಿಲ್ಲ ಎಂಬ ಮಾಹಿತಿ ನನಗೆ ದೊರೆತಿದ್ದು ಅಧಿಕಾರಿಗಳನ್ನು ಈ ಕುರಿತಾಗಿ ಕೇಳಿದಾಗ ಬೆಂಗಳೂರಿನಿಂದ ಪೂರೈಕೆ ಮಾಡಲಾದ ಕಿಟ್ಗಳು ಪರೀಕ್ಷೆ ನಡೆಸಲು ಪೂರಕವಾಗಿರಲಿಲ್ಲ. ಆ ಕಿಟ್ಗಳನ್ನು ವಾಪಾಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣ ರಾಜ್ಯ ಸರ್ಕಾರ ಈ ಬಗ್ಗೆ ಗಮನಿಸದಿರುವುದು ಎಂದು ಅವರು ದೂರಿದ್ದಾರೆ.
ಕೋವಿಡ್–19 ಪರೀಕ್ಷಾ ಪ್ರಯೋಗಾಲಯವನ್ನು ಜಿಲ್ಲೆಯಲ್ಲಿ ಪ್ರಾರಂಭ ಮಾಡುವಾಗಲೇ ವಿಳಂಬವಾಗಿತ್ತು. ಇದೀಗ ಇಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಇನ್ನು ಎರಡು ದಿನಗಳಿಂದ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯದಲ್ಲಿ ಸರಿಯಾಗಿ ಪರೀಕ್ಷೆಯನ್ನೇ ನಡೆಸಿಲ್ಲ. ಬೋಳೂರಿನ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದ ಬಳಿಕ ಅವರ ಕುಟುಂಬದವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಅವರನ್ನು ನಾನು ಸಂಪರ್ಕ ಮಾಡಿದೆ. ಅವರು ಇನ್ನು ಕೂಡಾ ಗಂಟಲಿನ ದ್ರವದ ಮಾದರಿಯ ಪರೀಕ್ಷೆ ಆಗಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ತುರ್ತು ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದೆ. ಆ ಕೂಡಲೇ ಅವರು ಕ್ವಾರಂಟೈನ್ನಲ್ಲಿದ್ದವರ ಗಂಟಲಿನ ದ್ರವದ ಮಾದರಿಯ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದರು. ಈ ವರದಿ ಮಂಗಳವಾರ ಬಂದಿದೆ. ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸುಸಜ್ಜಿತವಾದ ಆಸ್ಪತ್ರೆಗಳಿದ್ದು ಅಲ್ಲಿ ಪ್ರಯೋಗಾಯವನ್ನು ತೆರೆಯ ಬೇಕಿತ್ತು. ಈ ಕುರಿತಾಗಿ ಜಿಲ್ಲೆಯ ಹೊರಗಿನವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಸಕ್ತಿ ಹೊಂದಿಲ್ಲ. ಇನ್ನು ಮುಂದಾದರೂ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.