ಮಂಗಳೂರು, ಮೇ 6 (Daijiworld News/MSP): ಮಂಗಳೂರು ಹೃದಯ ಭಾಗದಲ್ಲಿ ಕಾಡುಕೋಣ ಓಡಾಟ ನಡೆಸಿ ಬಳಿಕ ಸೆರೆಯಾಗಿ ಕಾಡಿಗೆ ಮರಳಬೇಕಾಗಿದ್ದ ಕಾಡುಕೋಣ ಅಸುನೀಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಎಂದು ಆರೋಪಿಸಿ ಈ ಬಗ್ಗೆ ತನಿಖೆಗೆ ಒತ್ತಾಯಿಸಿ ನಗರದ ಬರ್ಕೆ ಠಾಣೆಗೆ ಸಾಮಾಜಿಕ ಹೋರಾಟಗಾರ ಜರಾಲ್ಡ್ ಟವರ್ಸ್ ದೂರು ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ ಮಂಗಳೂರು ನಗರದ ಕುದ್ರೋಳಿ, ಮಣ್ಣಗುಡ್ಡ ವ್ಯಾಪ್ತಿಯ ಜನನಿಬಿಡ ರಸ್ತೆಯಲ್ಲಿ ಈ ಕಾಡುಕೋಣ ದಿಢೀರ್ ಪ್ರತ್ಯಕ್ಷವಾಗಿ ಅಚ್ಚರಿ ಮತ್ತು ಆತಂಕ ಮೂಡಿಸಿತ್ತು. ಜನ, ವಾಹನದ ಗದ್ದಲದ ಕಂಡು ದಿಕ್ಕಾಪಾಲಾಗಿ ಓಡಾಡುತ್ತಿದ್ದ ಕಾಡುಕೋಣದ ಸೆರೆಗೆ ಅರಣ್ಯ ಇಲಾಖೆ ಆಗಮಿಸಿ ಬಳಿಕ ಪಿಲಿಕುಳ ವನ್ಯಜೀವಿ ಧಾಮದ ತಜ್ಞರ ತಂಡ ಆಗಮಿಸಿ ಅರಿವಳಿಕೆ ಇಂಜೆಕ್ಷನ್ ಪ್ರಯೋಗಿಸಿ ಸೆರೆ ಹಿಡಿದು ಕ್ರೇನ್ ಸಹಾಯದಿಂದ ಲಾರಿಗೇರಿಸಿ ರಕ್ಷಿತಾರಣ್ಯಕ್ಕೆ ಕರೆದೊಯ್ಯುವಾಗ ಮಾರ್ಗ ಮದ್ಯೆ ಮೃತಪಟ್ಟಿದೆ.
"ಕಾಡುಕೋಣ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಬೇಜವಾಬ್ದಾರಿತನದಿಂದ ಮೆರೆದಿದೆ. ಸೆರೆ ಹಿಡಿಯಲು ಉಪಯೋಗಿಸಿದ ಅವೈಜ್ಞಾನಿಕ ರೀತಿ, ಹಾಗೂ ಅರಿವಳಿಕೆ ಮದ್ದು ಮತ್ತು ಮ್ಮೈಮೇಲಿನ ಗಾಯಗಳು ಕಾಡುಕೋಣ ಅಸುನೀಗಲು ಕಾರಣವಾಗಿದೆ" ಎಂದು ಜರಾಲ್ಡ್ ಟವರ್ಸ್ ಆರೋಪಿಸಿದ್ದಾರೆ.