ಮಂಗಳೂರು, ಮೇ 06 (DaijiworldNews/SM): ಸಾರ್ವಜನಿಕರ ಬೇಡಿಕೆ ಮೇರೆಗೆ ಜಿಲ್ಲೆಯಲ್ಲಿ ಗುರುವಾರದಿಂದ ಎಲ್ಲಾ ರೀತಿಯ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಟ್ಟೆ ಅಂಗಡಿ ಓಪನ್ ಮಾಡುವ ಸಂದರ್ಭದಲ್ಲಿ ಕೆಲವು ಮುಂಜಾಗೃತ ಕ್ರಮಗಳನ್ನು ವಹಿಸಬೇಕೆಂದು ತಿಳಿಸಿದ್ದಾರೆ. ಬಟ್ಟೆ ಅಂಗಡಿಗಳಲ್ಲಿ ಅಗತ್ಯವಾಗಿ ಟ್ರಯಲ್ ರೂಂಗಳನ್ನು ಕಡ್ಡಾಯವಾಗಿ ಮುಚ್ಚಲೇಬೇಕು ಎಂದು ಆದೇಶ ನೀಡಿದ್ದಾರೆ. ಇನ್ನು ಇದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಅಂತರ ವಹಿಸಿಕೊಂಡು ವ್ಯಾಪಾರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಇನ್ನು ಮಾಲ್ ಗಳಲ್ಲಿರುವ ಬಟ್ಟೆ ಅಂಗಡಿಗಳನ್ನು ಪುನರಾರಂಭಿಸಲು ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಕೇವಲ ಅಂಗಡಿಗಳನ್ನಷ್ಟೇ ತೆರೆಯಬಹುದಾಗಿದೆ. ಮಾಲ್ ಗಳಲ್ಲಿರುವ ಬಟ್ಟೆ ಮಳಿಗೆಗಳನ್ನು ಯಾವುದೇ ಕಾರಣಕ್ಕೂ ತೆರೆಯಲು ಅವಕಾಶವಿಲ್ಲ ಎಂದು ಅವರು ಆದೇಶ ನೀಡಿದ್ದಾರೆ.