ಮಂಗಳೂರು ಮಾ 13: ಕ್ಯಾಬ್ ಚಾಲಕನೊಬ್ಬ ಮುಂಬೈ ಮೂಲದ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪದ ಮೇಲೆ ನಗರದ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಮೂಲದ ಕ್ಯಾಬ್ ಡ್ರೈವರ್ ದಯಾನಂದ (30) ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಆರೋಪಿ.
ಸ್ಮಿತಾ ಠಾಕ್ರೆ
ಮೂಲಗಳ ಪ್ರಕಾರ ಮುಂಬೈ ಮೂಲದ ಇಬ್ಬರು ಮಹಿಳೆಯರಾದ ಶರಿನ್ ಮಂತ್ರಿ ಹಾಗೂ ಸ್ಮಿತಾ ಠಾಕ್ರೆ ಅವರು ಮಾ. 9 ರಂದು ಮಂಗಳೂರಿಗೆ ದೇವಸ್ಥಾನಕ್ಕೆ ಭೇಟಿ ನೀಡಲೆಂದು ನಗರಕ್ಕೆ ಆಗಮಿಸಿದ್ದರು. ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಕೆಲವು ದೇವಸ್ಥಾನಗಳ ದರ್ಶನ ಪಡೆಯಲೆಂದು ಮಂಗಳೂರು ವಿಮಾನ ನಿಲ್ದಾಣದಿಂದ ಕ್ಯಾಬ್ ಬುಕ್ ಮಾಡಿದ್ದರು. ಅದರಂತೆ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುವ ವೇಳೆ ಕಾರು ಚಾಲಕ ದಯಾನಂದ ಕಾರು ಚಲಾಯಿಸುತ್ತಾ ಪೋನ್ ನಲ್ಲಿ ಮಾತನಾಡುತ್ತಿದ್ದ. ಇದನ್ನು ಶರೀನ್ ಹಾಗೂ ಸ್ಮಿತಾ ಪ್ರಶ್ನಿಸಿ ಮೊಬೈಲ್ ನಲ್ಲಿ ಡ್ರೈವಿಂಗ್ ಮಾಡುವಾಗ ಮಾತನಾಡದಂತೆ ಮೂರು ಬಾರಿ ಮನವಿ ಮಾಡಿದ್ದರು. ಇದರಿಂದ ಸಿಟ್ಟುಗೊಂಡ ಚಾಲಕ ದಯಾನಂದ ರಾಶ್ ಡ್ರೈವಿಂಗ್ ಮಾಡತೊಡಗಿದ. ಈ ವಿಚಾರವಾಗಿ ಮಹಿಳೆಯರು ಹಾಗೂ ಚಾಲಕನ ನಡುವೆ ಜಗಳ ಪ್ರಾರಂಭವಾಯಿತು. ಬಜ್ಪೆ ಸಮೀಪ ಬರುತ್ತಿದ್ದಂತೆ ಕಾರನ್ನು ನಿಲ್ಲಿಸುವಂತೆ ಸೂಚಿಸಿ ಮತ್ತೊಂದು ಕಾರನ್ನು ಬಾಡಿಗೆಗೆ ಪಡೆಯಲು ಮುಂದಾದರು . ಇದರಿಂದ ಸಿಟ್ಟಾದ ಚಾಲಕ ದಯಾನಂದ ಕಾರು ನಿಲ್ಲಿಸಿ ಶರೀನ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿಲಾಗಿದೆ.
ಈ ಪ್ರಕರಣ ಸಂಬಂಧ ಬಳಿಕ ಶರೀನ್ ಹಾಗೂ ಸ್ಮಿತಾ ಠಾಕ್ರೆ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಮಹಿಳೆಯರು ನೀಡಿದ ದೂರು ಆಧರಿಸಿ ಆರೋಪಿ ದಯಾನಂದ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ.
ಸ್ಮಿತಾ ಠಾಕ್ರೆ ಅವರು ಬಾಳಾ ಠಾಕ್ರೆಯ ಮಗನಾದ ಜೈದೇವ್ ಠಾಕ್ರೆಯವರ ಮಾಜಿ ಪತ್ನಿ ಎನ್ನಲಾಗಿದೆ.