ಮಂಗಳೂರು, ಮೇ 7 (Daijiworld News/MSP): ತಂಡವೊಂದು ಕ್ಷುಲ್ಲಕ ವಿಚಾರವಾಗಿ ಸಹೋದರಿಬ್ಬರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದವರನ್ನು ಸುರತ್ಕಲ್ ಇಡ್ಯ ನಿವಾಸಿಗಳಾದ ಕಾರ್ತಿಕ್ ಶೆಟ್ಟಿ ಮತ್ತು ಭರತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರ ಮೇಲೆ ರಾಹುಲ್, ಚರಣ್ ಹಾಗೂ ಇತರ ಮೂವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಕಾರ್ತಿಕ್ ಬುಧವಾರ ರಾತ್ರಿ 10:30ರ ಸುಮಾರಿಗೆ ತನ್ನ ತಮ್ಮ ಭರತ್ ಶೆಟ್ಟಿ ಜೊತೆಗೆ ಹೊಯ್ಗೆ ಬಝಾರ್ ಕಡೆಯಿಂದ ದಕ್ಕೆಯತ್ತ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ. ಹೊಯ್ಗೆ ಬಝಾರ್ ಭಗತ್ ಸಿಂಗ್ ರಸ್ತೆ ಬಳಿ ಬರುತ್ತಿದ್ದಂತೆ ಕಾರ್ತಿಕ್ ಮೊಬೈಲ್ ಫೋನ್ಗೆ ಕರೆಯೊಂದು ಬಂದಿದ್ದು, ಅವರು ಮಾತನಾಡುತ್ತಿದ್ದರೆನ್ನಲಾಗಿದೆ.
ಈ ವೇಳೆ ಬೈಕಿನಲ್ಲಿ ಅಲ್ಲಿಗೆ ಬಂದ ಆರೋಪಿ ರಾಹುಲ್ ಹಾಗೂ ಮತ್ತೋರ್ವ, ಮೊಬೈಲ್ ನಲ್ಲಿ ಜೋರಾಗಿ ಮಾತನಾಡುತ್ತಿರುವುದೇಕೆ ಎಂದು ಆಕ್ಷೇಪಿಸಿ ಕಾರ್ತಿಕ್ ಗೆ ಬೈಯ್ದು ಹೋದರೆನ್ನಲಾಗಿದೆ.
ಇದಾದ 10 ನಿಮಿಷಗಳ ಬಳಿಕ ಆರೋಪಿಗಳಾದ ರಾಹುಲ್, ಚರಣ್ ಹಾಗೂ ಇತರ ಮೂವರು ಎರಡು ಬೈಕ್ಗಳಲ್ಲಿ ಆಗಮಿಸಿ ಕಾರ್ತಿಕ್ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಈ ವೇಳೆ ತಡೆಯಲೆತ್ನಿಸಿದ ಭರತ್ ಮೇಲೂ ತಂಡ ಚೂರಿ ದಾಳಿ ನಡೆಸಿದ್ದಲ್ಲದೆ, ಇಬ್ಬರಿಗೂ ಜೀವ ಬೆದರಿಕೆ ಹಾಕಿ ತೆರಳಿದೆ ಎನ್ನಲಾಗಿದೆ. ಚೂರಿ ದಾಳಿಯಿಂದ ಗಾಯಗೊಂಡ ಇಬ್ಬರು ಅತ್ತಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.