ಮಂಗಳೂರು, ಮೇ 7 (Daijiworld News/MSP): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲೂಗಡ್ಡೆಯಲ್ಲಿ ಚಿನ್ನ ತೆಗೆಯುವ ಹೇಳಿಕೆ ನೀಡಿದಂತೆ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವ್ಯಂಗ್ಯವಾಡಿದ್ದಾರೆ.
"ಕೊರೊನಾ ಸಂಕಷ್ಟದ ಸಮಯದಲ್ಲಿ , ಸಿಎಂ ಯಡಿಯೂರಪ್ಪ ನೀಡಿರುವ ಆರ್ಥಿಕ ಪ್ಯಾಕೇಜ್ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿದೆ ಎಕರೆಗೆ ಅಂದಾಜು 50 ಲಕ್ಷ ರೂ. ಖರ್ಚು ಮಾಡಿ ಹೂ ಬೆಳೆದ ಕೃಷಿಕರಿಗೆ ಎಕರೆಗೆ ಕೇವಲ 25,000 ರೂ. ಪರಿಹಾರ ಘೋಷಿಸಿರುವುದು ಅನ್ಯಾಯ ಎಂದಿರುವ ಸಿದ್ದರಾಮಯ್ಯ, ಬೆಳೆಗಾರರ ನಷ್ಟದ ಅರ್ಧದಷ್ಟನ್ನಾದರೂ ತುಂಬಿಕೊಡಬೇಕು ಎಂದು ಸರಣಿ ಟ್ವೀಟ್ ಮೂಲಕ ರಾಜ್ಯದ ವಿಶೇಷ ಆರ್ಥಿಕ ಪ್ಯಾಕೇಜ್ ಟೀಕಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಂಸದ ನಳಿನ್ " ಒರ್ವ ರೈತ ಹೂ ಬೆಳೆಯಲು ಎಕ್ರೆಗೆ 50 ಲಕ್ಷ ರೂ ಖರ್ಚು ಮಾಡುತ್ತಾನೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಗಮನಿಸಿದ್ರೆ ರಾಹುಲ್ ಗಾಂಧಿ ಅಲೂಗಡ್ಡೆಯಲ್ಲಿ ಚಿನ್ನ ತೆಗೆದಂತ ರೀತಿಯಲ್ಲಿ ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯುವಂತ ಕೆಲಸ ಮಾಡಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ, ವಿತ್ತ ಸಚಿವರಾಗಿ ಕೆಲಸ ಮಾಡಿ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯನವರಿಗೆ ಒಬ್ಬ ರೈತ ಹೂವಿಗೆ ಎಕರೆಗೆ ಎಷ್ಟು ಖರ್ಚು ಮಾಡುತ್ತಾನೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲ ಎನ್ನುವುದು ನಾಚಿಕೆಯ ವಿಚಾರ" ಎಂದು ಟೀಕಿಸಿದ್ದಾರೆ.
ಸಿಎಂ ಆಗಿ ಅನುಭವ ಹೊಂದಿದ್ದ ಹಾಗೂ ರಾಜ್ಯದ ಸ್ಥಿತಿಗತಿ ಚೆನ್ನಾಗಿ ತಿಳಿದುಕೊಂಡಿದ್ದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿರುವಂತ ಯೋಜನೆಯನ್ನು ಸ್ವಾಗತ ಮಾಡಬೇಕಾಗಿತ್ತು ಅದು ಬಿಟ್ಟು ರಾಜ್ಯ ಸಂಕಷ್ಟದಲ್ಲಿರುವಾಗ, ಜನ ಕಣ್ಣೀರಿಡುವಂತಹ ಸಮಯದಲ್ಲಿ ರಾಜಕೀಯ ಮಾಡುವಂತ ಹೇಯ ಕೃತ್ಯ, ಹಾಗೂ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ.
ಈ ರಾಜ್ಯದ, ಕೃಷಿಕರ, ಕಾರ್ಮಿಕರ ಭವಿಷ್ಯತ್’ವನ್ನು ಯೋಚಿಸದ ಕಾಂಗ್ರೆಸ್, ಕೇವಲ ರಾಜಕಾರಣಕ್ಕಾಗಿ ಈ ಕಾಲಘಟ್ಟವನ್ನು ಉಪಯೋಗ ಮಾಡಿದೆ ಎನ್ನುವುದು ದುಃಖಕರ ವಿಚಾರ. ಸಿದ್ದರಾಮಯ್ಯರಂತಹ ಹಿರಿಯ ರಾಜಕಾರಣಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಓರ್ವ ಹೂ ಬೆಳೆಗಾರ ಎಕ್ರೆಗೆ ಎಷ್ಟು ಖರ್ಚು ಮಾಡುತ್ತಾನೆ ಎನ್ನುವುದನ್ನು ಸಿದ್ದರಾಮಯ್ಯ ಅದ್ಯಯನ ಮಾಡಲಿ, ಇಂತಹ ಸಮಯದಲ್ಲಿ ರಾಜಕಾರಣ ಮಾಡುವುದು ಬಿಟ್ಟು ನಾಡಿನ ಜನರ ರೈತರ ಕಣ್ಣಿರು ಒರೆಸುವ ಕೆಲಸ ಮಾಡುವುದು ಒಳಿತು ಎಂದು ನಳಿನ್ ಅವರು ಕಿವಿಮಾತು ಹೇಳಿದ್ದಾರೆ.