ಮಂಗಳೂರು, ಮೇ 07 (DaijiworldNews/SM): ಕೊರೊನಾ ಸೋಂಕು ಭೀತಿಯಿಂದ ದೇಶವೇ ಲಾಕ್ ಡೌನ್ ಆದ ಸಂದರ್ಭದಲ್ಲಿ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಹಾರಾಟ ರದ್ದುಗೊಳಿಸಲಾಗಿತ್ತು. ಇದೀಗ ವಿದೇಶದಲ್ಲಿ ಸಿಲುಕಿಕೊಂಡ ನಮ್ಮವರನ್ನು ಕರೆ ತರುವ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಮತ್ತೆ ಆರಂಭಗೊಳ್ಳಲಿದೆ. ಮೇ 12ರಂದು ದುಬೈನಿಂದ ಮಂಗಳೂರಿಗೆ ಮೊದಲ ವಿಮಾನ ಆಗಮಿಸಲಿದೆ.
ದುಬೈನಲ್ಲಿ ಸಿಲುಕಿಕೊಂಡಿರುವ ಮಂಗಳೂರಿಗರನ್ನು ಮತ್ತೆ ಊರಿಗೆ ಕರೆತರುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ಕಾರ್ಯಪ್ರವೃತವಾಗಿದೆ. ಅದರಂತೆ ಮೇ 12ರಂದು ಮೊದಲ ವಿಮಾನ ದುಬೈಯಿಂದ ಮಂಗಳೂರಿಗೆ ಆಗಮಿಸಲಿದೆ. ಮೊದಲ ವಿಮಾನದಲ್ಲಿ ಸುಮಾರು 180 ಮಂದಿ ಪ್ರಯಾಣಿಕರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತವರು ಸೇರಲಿದ್ದಾರೆ.
ಈ ಪೈಕಿ 6 ತಿಂಗಳ ಗರ್ಭಿಣಿಯರು, ಮಕ್ಕಳು, ಹಿರಿಯರಿಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ ಎಂಬುವುದಾಗಿ ದೈಜಿವರ್ಲ್ಡ್ಗೆ ಕೆಎನ್ಆರ್ಐ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯದ ಜತೆ ಕೇಂದ್ರ ಸಚಿವ ಸದಾನಂದ ಗೌಡ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ದುಬೈ ಸೇರಿದಂತೆ ಬೇರೆ ಬೇರೆ ಕೊಲ್ಲಿ ರಾಷ್ಟ್ರಗಳಲ್ಲಿ ಮಂಗಳೂರಿಗರು, ಕನ್ನಡಿಗರು ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ನಮ್ಮವರು ಉದ್ಯೋಗದಲ್ಲಿದ್ದಾರೆ. ಆದರೆ, ಇವರ ಪೈಕಿ ಇದೀಗ ಕೊರೊನಾ ಏಟಿಗೆ ಹಲವು ಮಂದಿ ನಿರುದ್ಯೋಗಿಗಳಾಗಿ ಸಂಕಷ್ಟದಲ್ಲಿದ್ದಾರೆ. ತಾವಿರುವ ಜಾಗದಲ್ಲಿ ಇರಲಾಗದೆ, ತವರಿಗೆ ಮರಳಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ದುಡಿಮೆ, ವೇತನವಿಲ್ಲದೆ, ಇದ್ದ ಹಣಾವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಭಾರತಕ್ಕೆ ಕರೆ ತರುವಂತೆ ನಿರಂತರ ಆಗ್ರಹಗಳು ಕೇಳಿಬಂದಿದ್ದವು. ಆದರೆ, ಕೊರೊನಾ ಲಾಕ್ ಡೌನ್ ಇದಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಇದೀಗ ಸರಕಾರ ನಮ್ಮವರ ಪರ ನಿಂತಿದೆ.
ಇನ್ನು ವಿದೇಶದಲ್ಲಿರುವ ನಮ್ಮವರನ್ನು ತವರಿಗೆ ಮರಳಿ ಕರೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ದೈಜಿವರ್ಲ್ಡ್ ನಿರಂತರ ಸುದ್ದಿಗಳನ್ನು ಪ್ರಕಟಿಸಿತ್ತು. ಇದೀಗ ನಮ್ಮವರನ್ನು ಕರೆ ತರಲು ಸರಕಾರ ಮುಂದಾಗಿದ್ದು, ಆ ಮೂಲಕ ನಿರಂತರ ವರದಿ ಪ್ರಕಟಿಸಿದ ನಮಗೆ ತೃಪ್ತಿ ನೀಡಿದೆ.
ಭಾರತಕ್ಕೆ ಕರೆ ತರುವ ಸಂದರ್ಭದಲ್ಲಿ ಏನೇನು ಪ್ರಕ್ರಿಯೆಗಳಿವೆ?
ಸಂಕಷ್ಟದಲ್ಲಿರುವ ನಮ್ಮವರನ್ನು ಅವರು ಇರುವ ರಾಷ್ಟ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ
ಕೊರೊನಾ ನೆಗೆಟಿವ್ ಬಂದವರಿಗೆ ಮೊದಲ ಆದ್ಯತೆ
ಭಾರತಕ್ಕೆ ಬಂದು ವಿಮಾನ ಲ್ಯಾಂಡ್ ಆದ ತಕ್ಷಣ ಮತ್ತೊಮ್ಮೆ ಅವರಿಗೆ ಪರೀಕ್ಷೆ
14 ದಿನಗಳ ಕಾಲ ಸರಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಕ್ವಾರಂಟೈನ್
ನೆಗೆಟಿವ್ ಬಂದಲ್ಲಿ ಬಳಿಕ 14 ದಿನಗಳ ಕಾಲ ಹೋಂ ಕ್ವಾರಂಟೈನ್
ಗರ್ಭಿಣಿಯರಿಗೆ 7 ದಿನಗಳ ಕಾಲ ಸರಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಕ್ವಾರಂಟೈನ್
ನೆಗೆಟಿವ್ ವರದಿ ಬಂದ ತಕ್ಷಣ ಹೋಂ ಕ್ವಾರಂಟೈನ್ ಗೆ ಅವಕಾಶ
ಮೇ 14ರಂದು ಎರಡನೇ ಲೀಸ್ಟ್ ಬಿಡುಗಡೆ
ಸೌದಿ, ಕತಾರ್ ನಲ್ಲಿರುವವರಿಗೆ ಅವಕಾಶ
ಊರಿಗೆ ಬರುವವರಿಗೆ ಹೋಟೆಲ್, ಹಾಸ್ಪಿಟಲ್, ಹಾಸ್ಟೆಲ್ ಕ್ವಾರಂಟೈನ್