ಕುಂದಾಪುರ, ಮೇ 07 (DaijiworldNews/SM): ಹೊಟೆಲ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಯೆಡ್ತೆರೆ ಜಂಕ್ಷನ್ ನಲ್ಲಿ ನಡೆದಿದೆ.
ಮಾರಣಾಂತಿಕ ಹಲ್ಲೆಗೊಳಗಾದ ಯುವಕನನ್ನು ಬೈಂದೂರು ಎಡ್ತೆರೆಯ ಬಾಳೆಹಿತ್ಲು ನಿವಾಸಿ ಬಾಬು ದೇವಾಡಿಗ ಎಂಬುವರ ಮಗ ದಿಲೀಪ್ ಕುಮಾರ್(24) ಎಂದು ಗುರುತಿಸಲಾಗಿದೆ. ದಿಲೀಪ್ ಕುಮಾರ್ ಯೆಡ್ತೆರೆ ಜಂಕ್ಷನ್ನಲ್ಲಿ ತನ್ನ ತಂದೆಯ ಜೊತೆಗೆ ಹಳ್ಳಿಮನೆ ಎಂಬ ಹೊಟೇಲ್ ನಡೆಸುತ್ತಿದ್ದಾರೆ. ಬುಧವಾರ ಸಂಜೆ 6.30ರ ಸುಮಾರಿಗೆ ಹೊಟೇಲ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಯೆಡ್ತೆರೆ ಜಂಕ್ಷನ್ನಲ್ಲಿ ಆಕಾಶ್ ಪೂಜಾರಿ, ಸುಕೇಶ್, ರೋಶನ್, ಶಿವರಾಜ್ ಹಾಗೂ ಕಿರಣ್ ಎಂಬುವರು ಕಾರಿನಲ್ಲಿ ಬಂದು ಅಡ್ಡ ಹಾಕಿ ಕಬ್ಬಿಣದ ರಾಡ್ನಲ್ಲಿ ಹಲ್ಲೆ ನಡೆಸಿದ್ದಾರೆ. ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಬಳಿಕ ತಲವಾರಿನಿಂದ ದಾಳಿ ಮಾಡಿ, ಕುತ್ತಿಗೆಯಲ್ಲಿದ್ದ ಮೂರೂವರೆ ಪವನ್ ಚಿನ್ನದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದಿಲೀಪ್ ಪೂಜಾರಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಗಂಭಿರ ಗಾಯಗೊಂಡ ದಿಲೀಪ್ ಸ್ಥಳದಲ್ಲಿಯೇ ಬಿದ್ದಿದ್ದು, ಬಳಿಕ ಅಲ್ಲಿಗೆ ಬಂದ ಪರಿಚಯದ ಗುರುರಾಜ್ ಹಾಗೂ ಮಂಜು ಎಂಬುವರು ಗಾಯಗೊಂಡ ದಿಲೀಪ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.