ಮಂಗಳೂರು, ಮೇ 08 (Daijiworld News/MSP): ಜನವರಿ 20 ರಂದು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ನ ಟಿಕೆಟ್ ಕೌಂಟರ್ ಬಳಿ ಬಾಂಬ್ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್ ನ ತನಿಖಾ ಪ್ರಕ್ರಿಯೆ ಮುಗಿದು, ಆರೋಪ ಪಟ್ಟಿ ಸಿದ್ದವಾಗಿದ್ದು ಅದನ್ನು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ರಾಜ್ಯ ಸರ್ಕಾರದ ಅನುಮತಿಗಾಗಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ಅವರು ಪ್ರಕರಣದ ತನಿಖಾಧಿಕಾರಿಯಾಗಿ ಇದೀಗ ತನಿಖೆಯನ್ನು ಪೂರ್ಣಗೊಳಿಸಿ ಸುಮಾರು 900 ಪುಟಗಳ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ.ರಾಜ್ಯ ಸರಕಾರದ ಅನುಮತಿ ಲಭಿಸಿದ ಕೂಡಲೇ ಈ ಪ್ರಕರಣದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಆದಿತ್ಯ ರಾವ್ ನ ಗುರುತು ಪತ್ತೆ ಪೆರೇಡ್ ಪೂರ್ತಿಗೊಳಿಸಲಾಗಿದ್ದು, ಇದೀಗ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಮಾತ್ರ ಬಾಕಿ ಇದೆ. ಬ್ರೈನ್ ಮ್ಯಾಪಿಂಗ್ ನಡೆಸುವ ಬಗ್ಗೆ ಆರೋಪಿಯ ಅನುಮತಿಯನ್ನು ಪಡೆಯಲಾಗಿದೆ . ಈಗಾಗಲೇ ಈ ಪ್ರಕ್ರಿಯೆ ಮುಗಿಸಬೇಕಾಗಿತ್ತು ಆದರೆ ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ಈ ಪ್ರಕ್ರಿಯೆ ವಿಳಂಬವಾಗಿದೆ. ಲಾಕ್ ಡೌನ್ ತೆರವಾದ ಕೂಡಲೇ ಆತನನ್ನು ಬೆಂಗಳೂರಿಗೆ ಕರೆದೊಯ್ದು ಪ್ರಕ್ರಿಯೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ