ಮಂಗಳೂರು, ಮೇ 08 (Daijiworld News/MSP): ಕೊರೊನಾದಿಂದ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಐತಿಹಾಸಿಕ ಏರ್ ಲಿಫ್ಟ್ ಕಾರ್ಯ ನಿನ್ನೆಯಿಂದ ಆರಂಭವಾಗಿದೆ. ಭಾರತದ ಈ "ವಂದೇ ಭಾರತ್ ಮಿಷನ್" ಏರ್ ಲಿಫ್ಟ್ ನಲ್ಲಿ ಮಂಗಳೂರಿನಲ್ಲಿ ಮೂಲದ ಪೈಲೆಟ್ ಒಬ್ಬರು ಭಾಗಿಯಾಗಿದ್ದಾರೆ ಎನ್ನುವುದು ಕರಾವಳಿಗರಿಗೆ ಹೆಮ್ಮೆ.
ಜಗತ್ತಿನ ಅತಿದೊಡ್ಡ ಏರ್ ಲಿಫ್ಟ್ ನ ಮೊದಲ ಭಾಗವಾಗಿ ಅಬುದಾಬಿಯಿಂದ ಹೊರಟ ಮೊದಲ ವಿಮಾನದಲ್ಲಿ 177 ಭಾರತೀಯ ಪ್ರಜೆಗಳು ಕೊಚ್ಚಿಯನ್ನು ತಡರಾತ್ರಿ ತಲುಪಿದ್ದಾರೆ. ಏರ್ ಇಂಡಿಯಾ ವಿಮಾನ ೬.೪೫ ಕ್ಕೆ ಅಬುಧಾಬಿಯಿಂದ ಹೊರಟಿದ್ದು, ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 10.17 ಕ್ಕೆ ತಲುಪಿದೆ. 177 ಪ್ರಯಾಣಿಕರಲ್ಲಿ ನಾಲ್ಕು ಮಕ್ಕಳ ಸಹಿತ , ಬಹುತೇಕರು ಗರ್ಭಿಣಿಯರು, ವೃದ್ದರು ಇದ್ದು ಭಾರತ ಸರಕಾರದ ಉಪಕಾರವನ್ನು ಹರ್ಷದಿಂದ ಕೊಂಡಾಡಿದ್ದಾರೆ. ಅಬುಧಾಬಿಯಿಂದ ಹೊತ್ತು ತಂದ ಮೊದಲ ಏರ್ ಇಂಡಿಯಾ ವಿಮಾನದ ಪೈಲಟ್ ಆಗಿ ಮಂಗಳೂರಿನ ಕ್ಯಾ. ಮೈಕಲ್ ಸಲ್ಡನಾ ಕಾರ್ಯನಿರ್ವಹಿಸಿದ್ದರು.
ಮಂಗಳೂರಿನ ವೆಲೆನ್ಸಿಯಾ ನಿವಾಸಿಯಾದ ಕ್ಯಾ. ಮೈಕಲ್ ಸಲ್ದನಾ ಐ ಎಕ್ಸ್ 344 ವಿಮಾನಕ್ಕೆ ಸಾರಥಿಯಾದರು. ಅಗತ್ಯ ಪಿಪಿಇ ಕಿಟ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನ ಕೈಗೊಂಡು ವಿಮಾನದಲ್ಲಿ ಭಾರತೀಯರನ್ನು ತಾಯ್ನಾಡಿಗೆ ಕರೆತಂದರು. ವಿಮಾನದ ಮತ್ತೊಬ್ಬ ಪೈಲೆಟ್ ಅಖಿಲೇಶ್ ಕುಮಾರ್ ಜೊತೆ ಇವರು ಭಾರತೀಯರನ್ನು ಯಶಸ್ವಿಯಾಗಿ ತಂದು ಕೊಚ್ಚಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದರು.