ಭಟ್ಕಳ, ಮೇ 08 (Daijiworld News/MSP): ಹಸುಗೂಸಿಗೆ ಚಿಕಿತ್ಸೆಗಾಗಿ ಪೋಷಕರು ಫಸ್ಟ್ ನ್ಯೂರೋ ಆಗಮಿಸಿದ ಪರಿಣಾಮ ಏಕಾಏಕಿ 12 ಪ್ರಕರಣ ಪತ್ತೆಯಾಗುವ ಮೂಲಕ ಉತ್ತರ ಕನ್ನಡದ ಭಟ್ಕಳವೀಗ ಕೊರೊನಾ ಹಾಟ್ ಸ್ಪಾಟ್ ಆಗುವ ಎಲ್ಲಾ ಲಕ್ಷಣ ಗೋಚರಿಸಿದೆ. ಆ ಮೂಲಕ ಇದೀಗ ಹೊರ ಜಿಲ್ಲೆಗೂ ಕೊರೊನಾ ಹರಡುವುದಕ್ಕೆ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಕಾರಣವಾಗಿರುವುದು ಗಂಭೀರ ವಿಚಾರ.
ಏ.15 ರಂದು ತನ್ನ 5 ತಿಂಗಳ ಹಸುಗೂಸಿನ ಚಿಕಿತ್ಸೆಗಾಗಿ ಕುಟುಂಬವೊಂದು ಆಗಮಿಸಿ ಏ.20ರಂದು ಡಿಸ್ಚಾರ್ಜ್ ಆಗಿ ಮತ್ತೆ ತಮ್ಮೂರದ ಭಟ್ಕಳಕ್ಕೆ ತೆರಳಿದ್ದರು. ಇದಾದ ಬಳಿಕ ಆ ಮಗುವಿನ ತಾಯಿಯ ತಂಗಿಗೆ ಆಗ್ಗಾಗ್ಗೆ ಜ್ವರ ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ಆಕೆಯಲ್ಲಿ ಸೋಂಕು ಇರುವುದು ದೃಢವಾಗಿತ್ತು. ಆದರೆ ವಿದೇಶಕ್ಕೆ ತೆರಳದೆ ಹಾಗೂ ವಿದೇಶದಿಂದ ಬಂದವರ ಸಂಪರ್ಕಕ್ಕೆ ಒಳಗಾಗದೆ ಆಕೆಗೆ ಸೋಂಕು ತಗುಲಿದ್ದು ಹೇಗೆ ಎಂಬ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ತಲೆಕೆಡಿಸಿಕೊಂಡಿತ್ತು. ಈ ವೇಳೆ ಆಕೆಯ ಅಕ್ಕ ಭಾವ ಅವರ ಮಗುವಿನ ಚಿಕಿತ್ಸೆಗಾಗಿ ಫಸ್ಟ್ ನ್ಯೂರೋಗೆ ಬಂದ ಅಂಶ ಬೆಳಕಿಗೆ ಬಂದಿತ್ತು. ಹೀಗಾಗಿ ಮೊದಲು ಕೊರೊನಾ ಕಂಡುಬಂದ ಆಕೆಯ ಕುಟುಂಬವನ್ನು ಕ್ವಾರಂಟೈನ್ ನಲ್ಲಿ ಇರಿಸಿ ಯುವತಿಯ ಸಂಪರ್ಕಕ್ಕೆ ಬಂದ ಎಲ್ಲರ ಪರೀಕ್ಷೆ ಮಾಡಲಾಗಿತ್ತು.
ಇಂದು ರಾಜ್ಯ ಆರೋಗ್ಯ ಇಲಾಖೆ ಮಧ್ಯಾಹ್ನ ಬುಲೆಟಿನಲ್ಲಿ ಇದೇ ಕುಟುಂಬ 5 ತಿಂಗಳ ಮಗು ಹಾಗೂ 11 ವರ್ಷದ ಮಗು ಸೇರಿ ಸುಮಾರು 12 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಹೀಗಾಗಿ ಫಸ್ಟ್ ನ್ಯೂರೋ ನಂಜು ಹೊರಜಿಲ್ಲೆಗೂ ವ್ಯಾಪ್ತಿಸಿರುವುದು ಇದರಿಂದ ಸ್ಪಷ್ಟವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಫಸ್ಟ್ ನ್ಯೂರೋ ಆಡಳಿತ ಮಂಡಳಿ ತನ್ನಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಜಿಲ್ಲಾಡಳಿತಕ್ಕೆ ನೀಡಿರಲಿಲ್ಲವೇ ಎಂಬ ಅನುಮಾನ ಹೊಗೆಯಾಡುವಂತೆ ಮಾಡಿದೆ.