ಬೆಳ್ತಂಗಡಿ, ಮೇ 08 (Daijiworld News/MSP): ಲಾಯಿಲ ನಿವಾಸಿ, ಅಬಕಾರಿ ಇಲಾಖೆಯಲ್ಲಿ ಉಪನಿರೀಕ್ಷರಾಗಿದ್ದ ದಿ.ತುಕರಾಮ ಮತ್ತು ವಿನುತಾ ದಂಪತಿ ಪುತ್ರ ವಿಮಲೇಶ್ (22) ಅವರ ಮೃತದೇಹ ತಮಿಳುನಾಡಿನ ಹೊಸೂರು ರೈಲು ಹಳಿಯಲ್ಲಿ ಪತ್ತೆಯಾಗಿದೆ.
ಏ.30 ರಂದು ಈ ಘಟನೆ ನಡೆದಿದ್ದು ಲಾಕ್ಡೌನ್ ಹಿನ್ನೆಲೆಯಲ್ಲಿ ಮೃತದೇಹವನ್ನು ಊರಿಗೆ ತರದೆ ಅಲ್ಲೆ ಸಂಸ್ಕಾರ ನಡೆಸಲಾಗಿದೆ.
ವಿಮಲೇಶ್ ಹೊಸೂರಿನಲ್ಲಿ ರಾಜಶ್ರೀ ಅಟೋಮೋಟಿವ್ ಪ್ರೈವೆಟ್ ಲಿಮಿಟೆಡ್ ಇಂಡಸ್ಟ್ರಿಯಲ್ಲಿ ಕೆಲಸದಲ್ಲಿದ್ದು ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯದಲ್ಲಿದ್ದರು.
ಘಟನೆಗೆ 10 ದಿನಗಳ ಹಿಂದೆ ಅವರ ಫೋನ್ ಸ್ವಿಚ್ಚ್ ಆಫ್ ಬರುತ್ತಿದ್ದ ಕಾರಣ ದಿಗಿಲುಗೊಂಡಿದ್ದ ತಾಯಿ, ಲಾಕ್ಡೌನ್ನಿಂದ ಪುತ್ರನಿಗೆ ಆರ್ಥಿಕ ಸಮಸ್ಯೆಯಾಗಿರಬಹುದು ಎಂದು ಬೆಳ್ತಂಗಡಿ ಠಾಣೆಗೆ ಬಂದು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಹೊಸೂರು ಠಾಣೆಗೆ ಸಂಪರ್ಕ ಸಾಧಿಸಿದ್ದ ಎಸ್.ಐ. ನಂದ ಕುಮಾರ್ ಅವರು ಬಳಿಕ ತಾಯಿ ಜತೆ ಮಗನ ಸಂಪರ್ಕ ಸಾಧಿಸಿಕೊಟ್ಟಿದ್ದರು.
ಇದಾದ ಕೆಲವೇ ದಿನಗಳ ಅಂತರದಲ್ಲಿ ಈ ದುರ್ಘಟನೆ ನಡೆದಿದೆ. ವಿಮಲೇಶ್ ಆಧ್ಯಾತ್ಮದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅವರು ಇದಕ್ಕೆ ಹೆಚ್ಚು ಸಮಯ ನೀಡುತ್ತಿದ್ದರು.
ಏ.30 ರಂದು ರೈಲ್ವೇ ಹಳಿಯಲ್ಲಿ ಮೃತದೇಹ ಇರುವ ಬಗ್ಗೆ ಅಲ್ಲಿನ ಠಾಣೆಗೆ ಯಾರೋ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಸಿಮ್ ಕಾರ್ಡ್ ಆಧರಿಸಿ ಕಾರ್ಯಾಚರಣೆ ನಡೆಸಿದ ವೇಳೆ ಮೃತಪಟ್ಟಿರುವುದು ವಿಮಲೇಶ್ ಎಂದು ಖಚಿತಗೊಂಡಿತ್ತು.
ಲಾಕ್ಡೌನ್ ಹಿನ್ನೆಲೆಯಲ್ಲಿ ಮೃತರ ತಾಯಿ ಮತ್ತು ಸಂಬಂಧಿಗಳು 4 ಮಂದಿಗೆ ವಿಶೇಷ ಪಾಸ್ ವ್ಯವಸ್ಥೆ ಮಾಡಿದ ಪೊಲೀಸರು ಹೊಸೂರಿಗೆ ಕಳುಹಿಸಿ ಪುತ್ರನ ಅಂತಿಮ ವಿಧಿಗಳಲ್ಲಿ ಭಾಗಿಯಾಗಲು ಅನುವು ಮಾಡಿಕೊಟ್ಟಿದ್ದರು. ಅದರಂತೆ ವಿಧಿವಿಧಾನ ನಡೆಸಲಾಗಿದೆ. ಈ ಕುರಿತು ಪೊಲೀಸ್ ತನಿಖೆ ಮುಂದುವರೆಸಲಾಗಿದೆ.