ಉಡುಪಿ, ಮೇ 08 (Daijiworld News/MSP): ಉಡುಪಿ ಜಿಲ್ಲೆಗೆ ವಿದೇಶಗಳಿಂದ ಮತ್ತು ಹೊರಾಜ್ಯದಿಂದ ಬರುವವರ ಕ್ವಾರಂಟೈನ್ ಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕ್ವಾರಂಟೈನ್ ಗಾಗಿ ಜಿಲ್ಲೆಯ ಖಾಸಗಿ ಶಾಲಾ ಮತ್ತು ಕಾಲೇಜುಗಳ ತಮ್ಮ ವ್ಯಾಪ್ತಿಯ ಕಟ್ಟಡಗಳು ಮತ್ತು ಹಾಸ್ಟೆಲ್ ಗಳನ್ನು ಜಿಲ್ಲಾಡಳಿತ ಕೋರಿದ ಕೂಡಲೇ ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ವಿದೇಶದಿಂದ ಮತ್ತು ಹೊರರಾಜ್ಯದಿಂದ ಆಗಮಿಸುವ ಜಿಲ್ಲೆಯ ಜನರಿಂದ , ಪ್ರಸ್ತುತ ಜಿಲ್ಲೆಯಲ್ಲಿನ ನಾಗರೀಕರನ್ನು ಕೋವಿಡ್ ನಿಂದ ರಕ್ಷಿಸುವುದು ಅತ್ಯಂತ ಸವಾಲಿನ ಕೆಲಸ, ಇದಕ್ಕಾಗಿ ವಿದೇಶದಿಂದ ಮತ್ತು ಹೊರರಾಜ್ಯದಿಂದ ಬರುವವರ ಕ್ವಾರಂಟೈನ್ ಗೊಳಿಸಬೇಕಾಗಿದ್ದು, ಇದಕ್ಕಾಗಿ ಜಿಲ್ಲೆಯ ಸರಕಾರಿ ಹಾಸ್ಟೆಲ್ ಗಳು, ಖಾಸಗಿ ಹಾಸ್ಟಲ್ ಗಳು ಮತ್ತು ಶಾಲಾ ಕಾಲೇಜುಗಳನ್ನು, ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ ಸೂಚಿಸ ಕೂಡಲೇ ಸಂಬಂದಪಟ್ಟ ಸಂಸ್ಥೆಗಳು , ಯಾವುದೇ ಸಬೂಬುಗಳನ್ನು ನೀಡದೇ ಕೂಡಲೇ ತಮ್ಮ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಬಿಟ್ಟು ಕೊಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕಟ್ಟಡಕ್ಕೆ ಸಣ್ಣಪುಟ್ಟ ದುರಸ್ತಿಗಳಿದ್ದರೆ ತಕ್ಷಣ ಮಾಡಿಸುವಂತೆ ತಿಳಿಸಿದರು.
ಕ್ವಾರಂಟೈನ್ ಗಾಗಿ ಬಳಸಕೊಳ್ಳುವ ಸರಕಾರಿ ಹಾಸ್ಟೆಲ್ ಗಳು, ಖಾಸಗಿ ಹಾಸ್ಟಲ್ ಗಳು ಮತ್ತು ಶಾಲಾ ಕಾಲೇಜುಗಳನ್ನು , ಕ್ವಾರಂಟೈನ್ ಮುಗಿದ ಕೂಡಲೇ ಸಂಪೂರ್ಣವಾಗಿ ಸ್ವಾನಿಟೈಸ್ ಮಾಡಿ, ಯಾವುದೇ ಸಂದರ್ಭದಲ್ಲಿ ಕೋವಿಡ್-19 ಕಂಡುಬರದ ರೀತಿಯಲ್ಲಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮರಳಿ ಬಿಟ್ಟು ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈಗಾಗಲೇ ಜಿಲ್ಲೆಗೆ ಹೊರರಾಜ್ಯದಿಂದ ಬರಲು ಪ್ರಥಮ ಹಂತದಲ್ಲಿ ಸುಮಾರು 6000 ಮಂದಿ ನೊಂದಾಯಿಸಿಕೊಂಡು ಕಾಯುತ್ತಿದ್ದು, ಇವರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಕೂಡಲೇ ಜಿಲ್ಲೆಗೆ ಇವರ ಪ್ರವೇಶ ಆರಂಭವಾಗಲಿದೆ, ಮೊದಲಿಗೆ ಇವರನ್ನು ಜಿಲ್ಲಾ ಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿ, ಪೊಲೀಸ್ ಎಸ್ಕಾರ್ಟ್ ನೊಂದಿಗೆ ಸಂಬಂಧಪಟ್ಟ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುವುದು, ಆರೋಗ್ಯ ಪರೀಕ್ಷೆಯಲ್ಲಿ ರೋಗ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು, ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆಗಬಯಸುವವರು ಹೋಟೆಲ್ ನ ವೆಚ್ಚವನ್ನು ತಮ್ಮ ಖರ್ಚಿನಲ್ಲಿ ಭರಿಸಬೇಕು, ಜಿಲ್ಲಾಡಳಿತ ವ್ಯವಸ್ಥೆ ಮಾಡುವ ಕೇಂದ್ರಗಳಲ್ಲಿ ಉತ್ತಮ ರೀತಿಯಲ್ಲಿ ಉಚಿತ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದ ಜಿಲ್ಲಾಧಿಕಾರಿ ಜಿ.ಜಗದೀಶ್, ವಿದೇಶದಿಂದ ಬರುವವರನ್ನು ಪ್ರತ್ಯೆಕವಾಗಿ ಸಿಂಗಲ್ ರೂಂ ಗಳಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ , ವಿದೇಶದಿಂದ ಮತ್ತು ಹೊರರಾಜ್ಯದಿಂದ ಜಿಲ್ಲೆಗೆ ಸುಮಾರು 20000 ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 12 ಚೆಕ್ ಪೋಸ್ಟ್ ಗಳನ್ನು ಆರಂಬಿಸಲಾಗಿದ್ದು, ಹೊರಗಿನಿಂದ ಬರುವವರಿಗೆ ಚೆಕ್ ಪೊಸ್ಟ್ ಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಪ್ರವೇಶ ನೀಡಲಾಗುತ್ತಿದೆ.
ಕುರಿತು ಕ್ವಾರಂಟೈನ್ ಕೇಂದ್ರಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ , ಅಡ್ಡಿಪಡಿಸುವವರನ್ನು ಸೆಕ್ಷನ್ 188, 269,270 ಪ್ರಕಾರ ಜೈಲುಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಕ್ವಾರಂಟೈನ್ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ನೀರಿನ ಸಮಸ್ಯೆಯಿದ್ದಲ್ಲಿ ಸಂಬಂಧಪಟ್ಟ ಪಂಚಾಯತ್ ಮೂಲಕ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು, ಸಂಸ್ಥೆಯ ಸಿಬ್ಬಂದಿಗಳು ಅಗತ್ಯ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು, ಕೇಂದ್ರದ ನಿರ್ವಹಣೆಗೆ ಅಗತ್ಯವಿದ್ದಲ್ಲಿ ಅದೇ ಸಂಸ್ಥೆಯ ನೌಕರರನ್ನು ನಿಯೋಜಿಸಲಾಗುವುದು ಹಾಗೂ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು , ಎಲ್ಲಾ ಕ್ವಾರಂಟೈನ್ ಕೇಂದ್ರಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.