ಉತ್ತರ ಕನ್ನಡ, ಮೇ 08 (DaijiworldNews/SM): ಭಟ್ಕಳದಲ್ಲಿ ಶುಕ್ರವಾರದಂದು ಪತ್ತೆಯಾದ 12 ಕೊರೊನಾ ಪ್ರಕರಣ ಸೇರಿದಂತೆ 13 ಪ್ರಕರಣಗಳು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಬಂದಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದೇಶದಿಂದ ಬಂದವರು ಅಥವಾ ಹೊರಗಿನಿಂದ ಬಂದವರನ್ನು ಪತ್ತೆ ಹಚ್ಚಿ ಕಡ್ಡಾಯವಾಗಿ 28 ದಿನಗಳ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅಲ್ಲದೆ, 48 ದಿನಗಳ ಕಾಲ ಎಲ್ಲಾ ರೀತಿಯಲ್ಲಿ ನಿಗಾ ವಹಿಸಲಾಗಿದೆ. ಜತೆಯಲ್ಲಿ ಏಪ್ರಿಲ್ 14ರ ಬಳಿಕ 20 ದಿನಗಳ ಕಾಲ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಸೋಂಕು ಎಲ್ಲಿಂದ ಬಂತು ಎಂಬ ಪ್ರಶ್ನೆ ಕಾಡುತ್ತಿದೆ. ಇತ್ತೀಚಿಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ರೋಗಿಗಳಿಂದ ಸೋಂಕು ಹರಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ. ಒಂದೊಮ್ಮೆ ಆ ಆಸ್ಪತ್ರೆಯಲ್ಲಿ ಈ ತಿಂಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೆವು ಎಂಬ ಮಾಹಿತಿ ನೀಡಿದ್ದರೆ, ಸೋಂಕು ನಿಯಂತ್ರಿಸಬಹುದಿತ್ತು ಎಂದು ಅವರು ತಿಳಿಸಿದ್ದಾರೆ.
ಮೊದಲ ಕುಟುಂಬ ಎಪ್ರಿಲ್ ಮೊದಲ ವಾರದಲ್ಲಿ ಹಾಗೂ ಇನ್ನೊಂದು ಕುಟುಂಬ ಎಪ್ರಿಲ್ 16ರಂದು ಚಿಕಿತ್ಸೆ ಪಡೆದುಕೊಂಡಿತ್ತು. ೩ನೇ ಕುಟುಂಬ ಎಪ್ರಿಲ್ 20ಕ್ಕೆ ಚಿಕಿತ್ಸೆ ಪಡೆದಿದೆ. ಎಪ್ರಿಲ್ ೨೦ಕ್ಕೆ ತೆರಳಿದ ಕುಟುಂಬದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನು ಭಟ್ಕಳದ 6 ಗ್ರಾ.ಪಂ. ವ್ಯಾಪ್ತಿಯಲ್ಲಿ ಕಂಟೈನ್ ಮೆಂಟ್ ಝೋನ್ ಎಂಬುವುದಾಗಿ ಘೋಷಣೆ ಮಾಡಲಾಗಿತ್ತು. ಕೇವಲ ಮೆಡಿಕಲ್ ವಿಚಾರಕ್ಕೆ ಸಂಬಂಧಿಸಿ ಮಾತ್ರವೇ ವಿನಾಯಿತಿ ನೀಡಿದಲಾಗಿತ್ತು. ಇದೇ ಸಂದರ್ಭದಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮೂರು ಕುಟುಂಬಗಳು ಜಿಲ್ಲೆಗೆ ಆಗಮಿಸಿದ್ದವು. ಒಂದೊಮ್ಮೆ ಅವರು ತಮ್ಮ ಸಂಪೂರ್ಣ ಮಾಹಿತಿ ನೀಡಿದ್ದರೆ, ಸೋಂಕು ನಿಯಂತ್ರಿಸಬಹುದಿತ್ತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.