ಮಂಗಳೂರು, ಮೇ 09 (Daijiworld News/MB) : ಕೆಲವು ದಿನಗಳ ಹಿಂದೆ ಮಂಗಳೂರು ಹೃದಯ ಭಾಗದಲ್ಲಿ ಕಾಣಸಿಕ್ಕಿದ್ದ ಕಾಡುಕೋಣವನ್ನು ಸೆರೆ ಹಿಡಿದು ಚಾರ್ಮಾಡಿ ಬಳಿ ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಕಾಡುಕೋಣ ಉದ್ವೇಗ, ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ತಿಳಿದು ಬಂದದೆ.
ಶುಕ್ರವಾರ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಗೆ ಮರಣೋತ್ತರ ಈ ಪರೀಕ್ಷಾ ವರದಿಯನ್ನು ಚಾರ್ಮಾಡಿಯ ಸರಕಾರಿ ವೈದ್ಯರು ನೀಡಿದ್ದು ಶನಿವಾರ ಈ ವರದಿ ಮಂಗಳೂರು ಅರಣ್ಯ ಇಲಾಖೆ ಕಚೇರಿಗೆ ತಲುಪಲಿದೆ. ಸರ್ಕಾರಕ್ಕೆ ಈ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಕರಿಕಾಳನ್ ತಿಳಿಸಿದ್ದಾರೆ.
ಶುಕ್ರವಾರವೂ ಕೂಡಾ ನಾಲ್ಕು ದಿನದಿಂದ ಮಂಗಳೂರು ನಗರದಲ್ಲಿ ಬೀಡು ಬಿಟ್ಟಿರುವ ಕಾಡು ಕೋಣವನ್ನು ಕಾಡಿಗಟ್ಟುವ ಕಾರ್ಯ ಮುಂದುವರೆದಿದ್ದು ಎರಡು ದಿನಗಳ ಹಿಂದೆ ಕಾಡು ಕೋಣ ತೋಕೂರು ಬಳಿ ಇರುವ ಕೆಐಒಸಿಎಲ್ ಪ್ರದೇಶದ ಕಾಡಿಗೆ ಹೋದ ಕಾರಣ ಅಲ್ಲಿನ ಪರಿಸರದ ರಸ್ತೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಹಾಗೆಯೇ ಕೋಣವಿದ್ದ ಪ್ರದೇಶಕ್ಕೆ ಹೋಗಲು ಸಾಧ್ಯವಾಗದ ಕಾರಣ ಡ್ರೋನ್ ಬಳಸಿ ಚಲನ ವಲನದ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.