ಸುಳ್ಯ, ಮೇ 09 (Daijiworld News/MSP): ಮದ್ಯಪಾನ ಮಾಡಿ ಮನೆಗೆ ನುಗ್ಗಿ ಆಸ್ತಿ ವಿಚಾರವಾಗಿ ಗಲಾಟೆ ಮಾಡಿದ ಮೈದುನನ್ನು, ಅತ್ತಿಗೆ ಹಾಗೂ ಆಕೆಯ ಪುತ್ರ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ಪೆರಾಜೆಯ ಪೀಚೆ ಮನೆ ಎಂಬಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಉತ್ತರಕುಮಾರ ಎಂದು ಗುರುತಿಸಲಾಗಿದೆ. ಆರೋಪಿಗಳಾದ ದಿ.ಕೇಶವ ಅವರ ಪತ್ನಿ ಶ್ರೀಮತಿ ತಾರಿಣಿ , ಹಾಗೂ ಪುತ್ರ ಧರಣೀಧರ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಹಿನ್ನಲೆ:
ದಿ.ಸಣ್ಣಯ್ಯ ಮತ್ತು ದಿ.ಮುದ್ದಯ್ಯ ಇವರಿಬ್ಬರು ಸಹೋದರಾಗಿದ್ದು ಸಣ್ಣಯ್ಯ ಗೌಡರ ಪುತ್ರ ದಿ.ಕೇಶವ( ಪತ್ನಿ ತಾರಿಣಿ). ಮುದ್ದಯ್ಯರವರ ಪುತ್ರ ಉತ್ತರಕುಮಾರ. ದಿ. ಸಣ್ಣಯ್ಯ ಗೌಡರ ಪುತ್ರ ಕೇಶವ ಮೃತಪಟ್ಟಿದ್ದು, ಇವರ ಪತ್ನಿ ತಾರಿಣಿ ಹಾಗೂ ಮೈದುನ ಉತ್ತರಕುಮಾರ ಇವರಿಬ್ಬರ ಮದ್ಯೆ ಆಸ್ತಿ ಕಲಹವಿತ್ತು.
ಶುಕ್ರವಾರ ಮಧ್ಯರಾತ್ರಿ ಉತ್ತರಕುಮಾರ ಪಾನಮತ್ತನಾಗಿ ತಾರಿಣಿಯವರ ಮನೆಯಂಗಳಕ್ಕೆ ಬಂದು ಬೈಯ್ಯತೊಡಗಿದರೆನ್ನಲಾಗಿದೆ. ಇದೇ ವೇಳೆ ಉತ್ತರ ಕುಮಾರ ತಾರಿಣಿ ಅವರ ಮನೆ ಪ್ರವೇಶಿಸಲು ಪ್ರಯತ್ನಪಟ್ಟಾಗ ತಾರಿಣಿ ಮತ್ತು ಆಕೆಯ ಪುತ್ರ ಧರಣೀಧರ ಉತ್ತರಕುಮಾರರಿಗೆ ಕತ್ತಿಯಿಂದ ಕಡಿದ್ದಾರೆ ಎನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡ ಉತ್ತರ ಕುಮಾರ ಅಂಗಳದಲ್ಲಿ ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದರೆನ್ನಲಾಗಿದೆ.
ಶನಿವಾರ ಬೆಳಗ್ಗೆ ಮಡಿಕೇರಿಯಿಂದ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ತಾರಿಣಿ ಮತ್ತು ಧರಣೀಧರ ಅವರನ್ನು ವಶಕ್ಕೆ ಪಡೆದಿದ್ದಾರೆ.