ಬಂಟ್ವಾಳ, ಮೇ 09 (Daijiworld News/MB) : ಮೊದಲೇ ಕೊರೊನಾದಿಂದ ಕಂಗೆಟ್ಟ ಕಡಲತಡಿಯ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯೂ ಬಗ್ಗುಲ ಮುಳ್ಳಾಗಿ ಪರಿಣಮಿಸಿದೆಯಾ ಎಂಬ ಪ್ರಶ್ನೆ ಕಾಡತೊಡಗಿದೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೂವರಿಗೆ ಹಾಗೂ ಉ.ಕ. ದ ಏಳು ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು ಮೇಲ್ನೋಟಕ್ಕೆ ಇವರೆಲ್ಲರಿಗೂ ಸೋಂಕು ಹರಡಲು ನಗರದ ಪಡೀಲ್ನ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟು ಎದ್ದುಕಾಣುತ್ತದೆ.
ಬಂಟ್ವಾಳದಲ್ಲಿ ಮೃತಪಟ್ಟ 69 ವರ್ಷದ P578 ವೃದ್ದನ ಸಂಪರ್ಕದಿಂದಾಗಿ ಬಂಟ್ವಾಳದ ಕಂಟೈನ್ಮೆಂಟ್ ಝೋನ್ ಕಸಬಾ ಗ್ರಾಮದ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ತಗುಲಿದೆ.
ವೃದ್ದನಿಗೆ ಬಂಟ್ವಾಳದಲ್ಲಿ ಮೃತಪಟ್ಟ P-390 ಮಹಿಳೆಯಿಂದ ಸೋಂಕು ತಗುಲಿದ್ದು ವೃದ್ದನಿಗೆ ಪಾಸಿಟಿವ್ ಹಿನ್ನೆಲೆ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸದ್ಯ ಮೂವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಮಂಗಳೂರಿನ ಫಸ್ಟ್ ನ್ಯೂರೋ ಸಂಪರ್ಕದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಭಟ್ಕಳದ್ಲಲ್ಲಿ 1 ಹಾಗೂ 2 ವರ್ಷದ ಕಂದಮ್ಮಗಳನ್ನು ಸೇರಿ 6 ಜನರಿಗೆ p-659 ರೋಗಿಯಿಂದಲೇ ಸೋಂಕು ಹರಡಿದ್ದು ಓರ್ವ ಸೋಂಕಿತ ವೃದ್ಧನಿಗೆ p-740 ರೋಗಿಯ ಸಂಪರ್ಕದಿಂದ ಸೋಂಕು ಹರಡಿದೆ.
ದ.ಕ ಜಿಲ್ಲೆಯಲ್ಲಿ ಈವರೆಗೂ 31 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಆ ಪೈಕಿ ಪ್ರಸ್ತುತ 15 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 3 ಮಂದಿ ಕೊರೊನಾಗೆ ಬಲಿಯಾಗಿದ್ದು 13 ಜನರು ಗುಣಮುಖರಾಗಿದ್ದಾರೆ.