ಮಂಗಳೂರು, ಮೇ 09 (Daijiworld News/MSP):: ಕೊರೊನಾದಿಂದ ದುಬೈನಲ್ಲಿ ಸಿಲುಕಿಕೊಂಡಿರುವ ಕರ್ನಾಟಕ ಕರಾವಳಿ ಭಾಗದ ಜನರನ್ನು ಹೊತ್ತ ಮೊದಲ ವಿಮಾನ ಎರಡು ದಿನ ಮುಂಚಿತವಾಗಿಯೇ ಅಂದರೆ ಮೇ. 12 ರಂದೇ ಮಂಗಳೂರಿಗೆ ಆಗಮಿಸಲಿದೆ.
ಮೇ 12ರಂದು ಇದ್ದ ದುಬೈ ಕರಾವಳಿಗರ ಏರ್ ಲಿಫ್ಟ್ ಮೇ 14 ರವರೆಗೆ ಮರು ನಿಗದಿಪಡಿಸಲಾಗಿತ್ತು. ಆದರೆ ಇದೀಗ ಮತ್ತೆ ದುಬೈನಿಂದ ಮಂಗಳೂರಿಗೆ ತೆರವು ಕಾರ್ಯಾಚರಣೆಯನ್ನು ನಿರ್ವಹಿಸುವ ಮೊದಲ ವಿಮಾನವನ್ನು ಮತ್ತೊಮ್ಮೆ ಮೇ 12 ಕ್ಕೆ ನಿಗದಿಪಡಿಸಲಾಗಿದೆ.
"ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.ಯುಎಇ ಕಾಲಮಾನ 16.10 ಕ್ಕೆ ದುಬೈನಿಂದ ವಿಮಾನವು ಹಾರಾಟ ನಡೆಸಲಿದ್ದು ಮೇ 12 ರಂದು ಬಾರತೀಯ ಕಾಲಮಾನದಂತೆ ರಾತ್ರಿ 9.10 ಕ್ಕೆ ಮಂಗಳೂರು ತಲುಪಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
ಈ ವಿಮಾನದಲ್ಲಿ ಹಿರಿಯ ನಾಗರೀಕರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಗರ್ಭಿಣಿಯರು ಸೇರಿದಂತೆ ತುರ್ತಾಗಿ ತಾಯ್ನಾಡಿಗೆ ಆಗಮಿಸಬೇಕಾಗಿರುವ 177 ಮಂದಿ ಮಂಗಳೂರಿಗೆ ಬರಲಿದ್ದಾರೆ. ದುಬೈನಿಂದ ಎರಡನೇ ವಿಮಾನವೂ ಮೇ-15 ರಂದು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.