ಮಂಗಳೂರು, ಮೇ 09 (DaijiworldNews/SM): ಕೊರೊನಾದಿಂದಾಗಿ ದೇಶವೇ ಲಾಕ್ ಡೌನ್ ಆದ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಇದೀಗ ಮಂಗಳೂರಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ತಮ್ಮ ಊರಿಗೆ ಕಳುಹಿಸುವ ಕಾರ್ಯ ಆರಂಭಗೊಂಡಿದ್ದು, ಮೊದಲ ರೈಲು ಪ್ರಯಾಣ ಆರಂಭಿಸಿದೆ.
ದೇಶದಾದ್ಯಂತ ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವುದರಿಂದ ಹೊರರಾಜ್ಯದ ವಲಸೆ ಕಾರ್ಮಿಕರು ಮಂಗಳೂರಿನಲ್ಲೇ ಬಾಕಿಯಾಗಿದ್ದರು. ಹೊರ ರಾಜ್ಯಗಳ ವಲಸೆ ಕಾರ್ಮಿಕರಿಗೆ ಮರಳಿ ಊರಿಗೆ ತೆರಳಲು ದಕ್ಷಿಣ ಜಿಲ್ಲಾಡಳಿತ ರೈಲಿನ ವ್ಯವಸ್ಥೆ ಮಾಡಿದ್ದು. ಅದರಂತೆ, ಇಂದು ಮಂಗಳೂರಿನಿಂದ ಜಾರ್ಖಾಂಡ್ ಗೆ ಮೊದಲ ರೈಲು ಹೊರಟಿದೆ. ರೈಲಿನಲ್ಲಿ ಒಂದು ಸಾವಿರ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಇನ್ನು, ರೈಲಿನ ಮೂಲಕ ಪ್ರಯಾಣಿಸಲು ಸೇವಾ ಸಿಂಧು ಯಾಪ್ ಮೂಲಕ ನೋಂದಣಿ ಮಾಡಿಕೊಂಡಿರುವವರ ಪೈಕಿ ಅವರ ಸೀನಿಯಾರಿಟಿ ಮೂಲಕ ತೆರಳುವ ಅವಕಾಶ ನೀಡಲಾಗಿದೆ. ಕಾರ್ಮಿಕರನ್ನು ಜಿಲ್ಲಾಡಳಿತವೇ ರೈಲು ನಿಲ್ದಾಣಕ್ಕೆ ಕರೆತರುವ ವ್ಯವಸ್ಥೆ ಮಾಡುತ್ತಿದೆ. ಜಿಲ್ಲಾಡಳಿತ ಸೂಚನೆ ಇಲ್ಲದೆ, ಯಾರೂ ಕೂಡಾ ರೈಲು ನಿಲ್ದಾಣಕ್ಕೆ ಬರಬಾರದೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮನವಿಯನ್ನು ಮಾಡಿದ್ದಾರೆ.