ಉಡುಪಿ, ಮೇ 10 (DaijiworldNews/SM): ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ವಿವಿಧ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಜಾರಿಗೆ ತರಲಾಗಿದ್ದ ಪರಿಣಾಮ ಇಂದು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಇದೀಗ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಉಡುಪಿಯಲ್ಲಿ ಮಾಸ್ಕ್ ಧರಿಸದೇ ಓಡಾಡಿದರೆ ಅವರಿಗೆ ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರಕಾರದ ನಿಯಮದಂತೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸಿಕೊಂಡೇ ವ್ಯವಹಾರ ನಡೆಸಬೇಕಾಗಿದೆ. ಒಂದೊಮ್ಮೆ ತಪ್ಪಿದ್ದಲ್ಲಿ ದಂಡ ವಿಧಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇನ್ನು ಸಾಮಾಗ್ರಿಗಳ ಖರೀದಿ ಸಂದರ್ಭದಲ್ಲಿ ಕಡ್ಡಾಯ ಸಾಮಾಜಿಕ ಅಂತರ ಪಾಲಿಸಬೇಕು. ಸಾಮಾಜಿಕ ಅಂತರವಿಲ್ಲದಿದ್ದಲ್ಲಿ ಅವರ ವಿರುದ್ಧವೂ ಕೂಡ ಕ್ರಮಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಅಗತ್ಯವಾಗಿದೆ. ಅದರೊಂದಿಗೆ ಮಾಸ್ಕ್ ಧರಿಸುವುದು ಕೂಡ ಕಡ್ಡಾಯವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.