ಕಾಸರಗೋಡು, ಮೇ 10 (DaijiworldNews/SM): ಕೊರೊನಾ ಮಹಾಮಾರಿ ದೇಶಕ್ಕೆ ಎಂಟ್ರಿಕೊಟ್ಟ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಹೆಸರು ಕೇಳಿದಾಕ್ಷಣ ಜನ ಆತಂಕ ಪಡುವ ಕಾಲವೊಂದಿತ್ತು. ಆದರೆ, ಅದೇ ಕಾಸರಗೋಡು ಜಿಲ್ಲೆ ಇದೀಗ ತಲೆ ಎತ್ತಿನಿಂತಿದೆ. ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೊನೆಯ ರೋಗಿಯು ಆದಿತ್ಯವಾರ ಸಂಜೆ ಗುಣಮುಖರಾಗಿ ಬಿಡುಗಡೆಗೊಳ್ಳುವುದರೊಂದಿಗೆ ಕಾಸರಗೋಡು ಜಿಲ್ಲೆ ಸಂಪೂರ್ಣ ಕೊರೊನಾ ಸೋಂಕು ಮುಕ್ತವಾಗಿದ್ದು, ದೇಶಕ್ಕೆ ಮಾದರಿಯಾಗಿದೆ.
ಆ ಮೂಲಕ ಜಿಲ್ಲೆಯಲ್ಲಿದ್ದ ಸೋಂಕಿತ 178 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರಿಂದ ಶೇಕಡಾ ನೂರರಷ್ಟು ಮಂದಿಯನ್ನು ಗುಣಪಡಿಸಿದ ಖ್ಯಾತಿ ಆರೋಗ್ಯ ಇಲಾಖೆಗೆ ಸಲ್ಲುತ್ತಿದೆ. ಕಾಸರಗೋಡನ್ನು ದೂರ ಮಾಡಿದ್ದ ಎಲ್ಲರಿಗೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕೈಗೊಂಡ ಕ್ರಮ ಸೆಡ್ಡುಹೊಡೆಯುವಂತಾಗಿದೆ.
ದೇಶದಲ್ಲೇ ಮೂರನೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾದದ್ದು ಕಾಸರಗೋಡು ಜಿಲ್ಲೆಯಲ್ಲಿ. ಫೆಬ್ರವರಿ ಮೂರರಂದು ಚೀನಾದ ವುಹಾನ್ ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿತ್ತು. ಅದು ಕಾಸರಗೋಡು ಜಿಲ್ಲೆಯಲ್ಲೇ ಮೊದಲ ಪ್ರಕರಣವಾಗಿತ್ತು. ಆದರೆ ಆರೋಗ್ಯ ಇಲಾಖೆ ಈ ದಿನದಿಂದಲೇ ಎಚ್ಚರಿಕೆ ವಹಿಸಿತ್ತು. ಈ ರೋಗಿಯನ್ನು ಗುಣಪಡಿಸಿತ್ತು.
ಇದಾದ ಬಳಿಕ ಮಾರ್ಚ್ 16 ರಂದು ದುಬೈಯಿಂದ ಬಂದಿದ್ದ ಕಳ್ನಾಡ್ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿತ್ತು. ಮಾರ್ಚ್ 19 ರಂದು ದುಬೈಯಿಂದ ಬಂದಿದ್ದ ಎರಿಯಾಲ್ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿತ್ತು. ದುರಾದೃಷ್ಟ ಅಂದರೆ, ಅದೇ ವ್ಯಕ್ತಿ ಜಿಲ್ಲೆಯಲ್ಲಿ ಆ ಮೊದಲು ನಡೆದ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಆ ಮೂಲಕ ಮತ್ತಷ್ಟು ಆತಂಕದ ಪರಿಸರ ನಿರ್ಮಾಣಗೊಂಡಿತ್ತು. ಈ ವಿಚಾರ ಖಚಿತವಾಗುತ್ತಿದ್ದಂತೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ನಿದ್ದೆ ಗೆಡಿಸುವಂತ ಮಾಡಿತ್ತು.
ಬಳಿಕ ದಿನಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಲೇ ಸಾಗಿತು. ಸೋಂಕು ನಿಯಂತ್ರಣ ಅಸಾಧ್ಯ ಎಂಬ ಮಾತು ಕಾಡತೊಡಗಿತು. ಈ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಚ್ 21ರಿಂದ ಲಾಕ್ ಡೌನ್ ಜಾರಿಗೆ ಬಂದಿತ್ತು. ಆದರೆ 21 ರಂದು ಆರು, 22 ರಂದು 5, 23 ರಂದು 19 ಹೀಗೆ ಸೋಂಕಿತರ ಸಂಖ್ಯೆ ದ್ವಿಗುಣ ಗೊಳ್ಳುತ್ತಾ ಸಾಗಿತು.
ಆದರೆ ಮಾರ್ಚ್ 27ನೇ ದಿನ ಮಾತ್ರ ಜಿಲ್ಲೆಯ ಪಾಲಿಗೆ ಕರಾಳವಾಗಿತ್ತು. ಒಂದೇ ದಿನ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸುವ ವರದಿ ಲಭ್ಯವಾಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ 34 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದರಿಂದ ಕಾಸರಗೋಡು ಜಿಲ್ಲೆಯನ್ನು ಇಡೀ ದೇಶವೇ ಬೊಟ್ಟುಮಾಡಿ ನೋಡುವ ದಿನ ಬಂದಿತ್ತು. ಬಳಿಕದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಾ ಸಾಗಿತು. ಏಪ್ರಿಲ್ ಮೊದಲ ವಾರದಲ್ಲಿ ಒಂದೇ ದಿನ 12 ಪ್ರಕರಣಗಳು ದೃಢಪಟ್ಟಿತ್ತು. ಆದರೆ ಏಪ್ರಿಲ್ 30ರ ಬಳಿಕದ ದಿನಗಳು ಜಿಲ್ಲೆಯ ಪಾಲಿಗೆ ಸಿಹಿಯಾದವು. ಏಪ್ರಿಲ್ 30 ರಂದು ಕೊನೆಯದಾಗಿ ಸೋಂಕು ಪತ್ತೆಯಾಗಿತ್ತು. ಆ ಬಳಿಕದ ಹತ್ತು ದಿನಗಳ ಅವಧಿಯಲ್ಲಿ ಹೊಸ ಸೋಂಕು ದೃಢಪಟ್ಟಿಲ್ಲ. ಆದರೆ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಾ ಸಾಗಿತ್ತು. ಮೇ ೧೦ರ ಆದಿತ್ಯವಾರ ಕೊನೆಯ ಸೋಂಕಿತ ಗುಣಮುಖ ರಾಗುವ ಮೂಲಕ ಕಾಸರಗೋಡು ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ. ಕೊರೊನಾ ಮುಕ್ತ ಜಿಲ್ಲೆಯಾಗಿದೆ.
ಜಿಲ್ಲೆಯಲ್ಲಿ ಓರ್ವ ಪತ್ರಕರ್ತ ಸೇರಿದಂತೆ 178 ಮಂದಿಯಲ್ಲಿ ಸೋಂಕು ಕಂಡುಬಂದಿತ್ತು. ಈ ಪೈಕಿ ಬಹುತೇಕ ಮಂದಿ ವಿದೇಶದಿಂದ ಬಂದವರಾಗಿದ್ದಾರೆ. ಇದಲ್ಲದೆ ಸೋಂಕಿತರ ಸಂಪರ್ಕದಿಂದ 40ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಂಡುಬಂದಿತ್ತು. ಈ ಮಧ್ಯೆ ಸೋಂಕು ಲಕ್ಷಣ ಇಲ್ಲದವರನ್ನು ತಪಾಸಣೆ ನಡೆಸಿದಾಗ ಸೋಂಕು ಪತ್ತೆಯಾಗಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿತ್ತು. ಬಳಿಕದ ದಿನಗಳಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ತೆರೆಯಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲೂ ಚಿಕಿತ್ಸಾ ವಾರ್ಡ್ ತೆರೆಯಲಾಗಿತ್ತು.
ಇದಲ್ಲದೆ ಉಕ್ಕಿನಡ್ಕದಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಟ್ಟಡವನ್ನು ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಅಗತ್ಯ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಮಾತ್ರವಲ್ಲ ತಿರುವನಂತಪುರ ವೈದ್ಯಕೀಯ ಕಾಲೇಜಿನ ಡಾ. ಸಂತೋಷ್ ಕುಮಾರ್ ನೇತೃತ್ವದ ೨೭ ಮಂದಿಯ ವೈದ್ಯಕೀಯ ತಂಡವನ್ನು ಕಳುಹಿಸಿಕೊಡಲಾಗಿತ್ತು. ಆರೋಗ್ಯ ಇಲಾಖೆ ನಡೆಸಿದ ನಿರಂತರ ಹೋರಾಟ, ಕಟ್ಟುನಿಟ್ಟಿನ ಕ್ರಮದಿಂದಾಗಿ ಇಂದು ಕಾಸರಗೋಡು ಜಿಲ್ಲೆ ಕೊರೋನ ಮುಕ್ತಗೊಳ್ಳಲು ಪ್ರಮುಖ ಕಾರಣವಾಗಿದೆ.