ಉಳ್ಳಾಲ, ಮೇ 10 (DaijiworldNews/SM): ಉಸಿರಾಟದ ತೊಂದರೆಯಿಂದ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಕುಂಪಲ ಮೂರುಕಟ್ಟೆ ನಿವಾಸಿ ಯುವಕನ ಕೋವಿಡ್ ಪರೀಕ್ಷೆಯಲ್ಲಿ ವರದಿ ಲಭ್ಯವಾಗಿದ್ದು, ನೆಗೆಟಿವ್ ಆಗಿದೆ. ಆ ಮೂಲಕ ಪರಿಸರದಲ್ಲಿ ಉಂಟಾಗಿದ್ದ ಆತಂಕ ದೂರವಾದಂತಾಗಿದೆ.
ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯುವಕನನ್ನು ಶನಿವಾರ ಸಂಜೆ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಾರೋಗ್ಯ ಹಿನ್ನೆಲೆಯಲ್ಲಿ ಯುವಕನನ್ನು ಆತನ ತಾಯಿ ತೊಕ್ಕೊಟ್ಟು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು.
ಇದರಿಂದ ಕುಂಪಲ ಭಾಗದ ಜನರಲ್ಲಿ ಆತಂಕ ಉಂಟಾಗಿತ್ತು. ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಯುವಕನ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಭಾನುವಾರ ಸಂಜೆ ಮನೆಮಂದಿಗೆ ಸಿಕ್ಕಿದೆ. ವರದಿ ನೆಗೆಟಿವ್ ಎಂದು ಬಂದಿದೆ. ಯುವಕನನ್ನು ಇಂದು ರಾತ್ರಿಯೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಿದ್ದಾರೆ.