ಉಳ್ಳಾಲ, ಮೇ 10 (DaijiworldNews/SM): ನಿವೃತ್ತ ಕ್ಯಾಪ್ಟನ್ ಓರ್ವರು ತಮ್ಮ ಖಾಸಗಿ ಬೋಟಿನಲ್ಲಿ ರಾಷ್ಟ್ರಧ್ವಜವನ್ನೇ ಉಲ್ಟಾ ಹಾಕುವ ಮೂಲಕ ರಾಷ್ಟ್ರೀಯತೆಗೆ ಅವಮಾನಿಸಿರುವ ಘಟನೆ ಉಳ್ಳಾಲದ ನೇತ್ರಾವತಿ ನದಿಯಲ್ಲಿ ನಡೆದಿದೆ. ರಾಣಿಪುರ ನಿವಾಸಿ ಆಗಿರುವ ವ್ಯಕ್ತಿ, ಶಿಪ್ ನಲ್ಲಿ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದವರು.
ನಿವೃತ್ತಿ ಜೀವನದಲ್ಲಿ ತನ್ನದೇ ಸ್ಪೀಡ್ ಬೋಟ್ ಮೂಲಕ ನೇತ್ರಾವತಿ ನದಿಯಲ್ಲಿ ವಿಹಾರ ನಡೆಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ನದಿ ಮೂಲಕವೇ ಬೋಳೂರು, ಧಕ್ಕೆವರೆಗೂ ಬರುವ ಕ್ಯಾಪ್ಟನ್ ಮೀನು, ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುತ್ತಾರೆ. ಭಾನುವಾರವೂ ಸ್ಪೀಡ್ ಬೋಟ್ ಮೂಲಕ ಬೋಳಾರದವರೆಗೆ ಬಂದಿರುವ ಕ್ಯಾಪ್ಟನ್ ತಮ್ಮ ಸ್ಪೀಡ್ ಬೋಟಿನಲ್ಲಿ ರಾಷ್ಟ್ರಧ್ವಜವನ್ನೇ ಉಲ್ಟಾ ಹಾಕಿದ್ದಾರೆ.
ಈ ಬಗ್ಗೆ ಸ್ಥಳೀಯ ಮೀನುಗಾರರು ನಿವೃತ್ತ ಕ್ಯಾಪ್ಟನ್ ಅವರ ಗಮನಸೆಳೆದರೂ, ಕ್ಯಾರೇ ಅನ್ನದೆ ಮೀನುಗಾರರ ವಿರುದ್ಧವೇ ಹರಿಹಾಯ್ದಿದ್ದಾರೆ. ಕಾನೂನು ಪ್ರಕಾರ ಮೀನುಗಾರಿಕಾ ದೋಣಿಗಳಲ್ಲಾಗಲಿ, ಖಾಸಗಿ ದೋಣಿಗಳಲ್ಲಾಗಲಿ ಅಶೋಕ ಚಕ್ರ ಲಾಂಛನದ ಧ್ವಜ ಹಾಕುವಂತಿಲ್ಲ. ಬದಲಾಗಿ ಲಾಂಛನವಿಲ್ಲದೆ ತ್ರಿವರ್ಣ ಧ್ವಜವನ್ನು ಬಳಸಬಹುದು. ಆದರೆ ಕಾನೂನು ದಿಕ್ಕರಿಸಿ ರಾಷ್ಟ್ರಧ್ವಜವನ್ನು ಹಾಕಿರುವ ಕ್ಯಾಪ್ಟನ್, ಅದನ್ನೂ ಸರಿಯಾಗಿ ಹಾಕದೆ, ಉಲ್ಟಾ ಹಾಕುವ ಮೂಲಕ ರಾಷ್ಟ್ರೀಯತೆಗೆ ಅವಮಾನಿಸಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತು ಕರಾವಳಿ ಕಾವಲು ಪಡೆಯ ಪೊಲೀಸರ ಗಮನಕ್ಕೂ ತರಲಾಗಿದೆ. ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಅವರು ಸಂಬಂಧಿಸಿದ ಇಲಾಖೆಗೆ ಕ್ರಮಕೈಗೊಳ್ಳಲು ಸೂಚಿಸುವ ಭರವಸೆ ನೀಡಿದ್ದಾರೆ.