ಮಂಗಳೂರು, ಮೇ 10 (DaijiworldNews/SM): ದ.ಕ. ಜಿಲ್ಲೆಯಲ್ಲಿ ಆತಂಕವನ್ನುಂಟು ಮಾಡಿದ್ದ ಕೊರೊನಾ ಕಳೆದ ಎರಡು ದಿನಗಳಿಂದ ನಿಯಂತ್ರಣದಲ್ಲಿದೆ. ಜಿಲ್ಲೆಯ ಮಟ್ಟಿಗೆ ರವಿವಾರವೂ ಗುಡ್ ನ್ಯೂಸ್ ಲಭಿಸಿದೆ. ಜಿಲ್ಲೆಯಲ್ಲಿ ರವಿವಾರದಂದು 190 ಪರೀಕ್ಷಾ ವರದಿಗಳು ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್ ಆಗುವ ಮೂಲಕ ಜನ ನಿರಾಳರಾಗಿದ್ದಾರೆ.
ಇನ್ನು ರವಿವಾರದಂದು 88 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. 15 ಮಂದಿ ನಿಗಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಸದ್ಯ ಜಿಲ್ಲೆಯಲ್ಲಿ ಇಲ್ಲಿಯ ತನಕ ದಾಖಲಾದ ಪಾಸಿಟಿವ್ ಪ್ರಕರಣಗಳ ಪೈಕಿ 15 ಮಂದಿ ನಗರ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕ ಗುಣಮುಖರಾಗುತ್ತಿದ್ದಾರೆ. ಇಲ್ಲಿಯ ತನಕ ಸುಮಾರು 2890 ಮಂದಿ ಫಿವರ್ ಕ್ಲೀನಿಕ್ ಗಳಲ್ಲಿ ಪರೀಕ್ಷೆ ನಡೆಸಿದ್ದಾರೆ.
ಇನ್ನು ರವಿವಾರದಂದು 36 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. 32 ಮಂದಿ ಎನ್ ಐಟಿಕೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. 40 ಮಂದಿ ಇಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. 6073 ಮಂದಿ 28 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ.