ಸಸಿಹಿತ್ಲು, ಮೇ 11 (Daijiworld News/MB) : ತಂಡಗಳ ಮಧ್ಯೆ ಹೊಡೆದಾಟ ನಡೆದು ಇಬ್ಬರು ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಭಗವತೀ ದೇವಸ್ಥಾನದ ಬಳಿಯಲ್ಲಿ ಶನಿವಾರ ತಡರಾತ್ರಿ ನಡೆದಿದ್ದು ಗಂಭೀರ ಗಾಯಗೊಂಡಿರುವ ಇಬ್ಬರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಚೂರಿ ಇರಿತಕ್ಕೆ ಒಳಗಾದವರನ್ನು ಜಿತೇಶ್ ಹಾಗೂ ಪ್ರಶಾಂತ್ ಎಂದು ಗುರುತಿಸಲಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಭಾನುವಾರ ಮುಂಜಾನೆ ಸರ್ಜರಿ ಮಾಡಲಾಗಿದೆ. ಜಿತೇಶ್ನ ಹೊಟ್ಟೆ ಹಾಗೂ ಬೆನ್ನಿಗೆ, ಪ್ರಶಾಂತ್ನ ಬೆನ್ನು ಹಾಗೂ ಶ್ವಾಸಕೋಶಕ್ಕೆ ಗಾಯವಾಗಿದೆ.
ಹಳೆ ದ್ವೇಷದಿಂದಾಗಿ ಪ್ರಶಾಂತ್ ಹಾಗೂ ಇತರ ಕೆಲವರು ಸೇರಿ ದೇವಸ್ಥಾನದ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಿತೇಶ್, ಸೌರಭ್, ಜಸ್ವೀನ್, ಸುಜಿತ್ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದು ಪರಸ್ಪರ ಮಾತುಕತೆ ಜಗಳಕ್ಕೆ ತಿರುಗಿ ಚೂರಿ ಇರಿಯಲಾಗಿದೆ.
ಜಿತೇಶ್ನೊಂದಿಗೆ ಸೌರವ್ ಹಾಗೂ ಜಸ್ಟೀನ್ಗೂ ಇರಿತದಿಂದ ಗಾಯವಾಗಿದ್ದು ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರನ್ನು ಆಸ್ಪತ್ರೆಗೆ ಕರೆತಂದಾಗಲೂ ಗುಂಪಿನ ಮಧ್ಯೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಜಿತೇಶ್ ನೀಡಿರುವ ದೂರಿನಂತೆ ಪ್ರಶಾಂತ್ ಹಾಗೂ ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಮಧ್ಯೆ ಪ್ರಶಾಂತ್ ತಾಯಿ ಕೂಡಾ ಪ್ರತಿ ದೂರು ನೀಡಿದ್ದು ನನ್ನ ಮಗನ ಮೇಲೆ ೩೦ ಮಂದಿ ಸೇರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.