ಮಲ್ಪೆ, ಮೇ 11(Daijiworld News/MSP): ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಶನಿವಾರ ರಾತ್ರಿ ಮಲ್ಪೆ ಸೈಂಟ್ ಮೇರಿ ದ್ವೀಪದಲ್ಲಿ ಪಾರ್ಟಿ ನಡೆಸುತ್ತಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಮಲ್ಪೆಯ ಕರಾವಳಿ ಕಾವಲು ಪೊಲೀಸರು ದಾಳಿ ನಡೆಸಿ ಅಲ್ಲಿದ್ದ 7 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಸೈಂಟ್ ಮೇರಿ ದ್ವೀಪದಲ್ಲಿ ಶನಿವಾರ ರಾತ್ರಿ 9.30ಕ್ಕೆ ದ್ವೀಪದಲ್ಲಿ ವಿದ್ಯುತ್ ದೀಪಗಳ ಬೆಳಕು ಕಾಣುತ್ತಿತ್ತು. ಬೆಳಕು 11 ಗಂಟೆಯ ವರೆಗೂ ಒಂದೇ ಸ್ಥಳದಲ್ಲಿರುವುದನ್ನು ಗಮನಿಸಿದ ಸ್ಥಳೀಯರು, ರಾತ್ರಿ 11 ಗಂಟೆಗೆ ಮಲ್ಪೆ ಪೊಲೀಸ್ ಠಾಣೆ ಹಾಗೂ ಕರಾವಳಿ ಕಾವಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಅಲರ್ಟ್ ಆಗುತ್ತಿದ್ದಂತೆ ದ್ವೀಪದಲ್ಲಿ ಉರಿಯುತ್ತಿದ್ದ ದೀಪ ಆರಿಸಲಾಯಿತು. ಆ ಬಳಿಕ ದ್ವೀಪದಲ್ಲಿ ಇರುವವರ ಮಾಹಿತಿ ಕಲೆ ಹಾಕಲು ಹೊರಟಾಗ ಪೊಲೀಸರು ಪ್ರವಾಸಿ ಬೋಟುಗಳ ಜೆಟ್ಟಿಯ ಸಮೀಪ ಉಡುಪಿ ನೋಂದಣಿಯ ಕೆಎ 20 ಎಂಎ 1239 ಮತ್ತು ಮಂಗಳೂರು ನೋಂದಣಿಯ ಕೆಎ 19 ಎಂಜಿ 1895 ಕಾರುಗಳನ್ನು ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಕಾರು ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ಅವರಿಗೆ ಸೇರಿದ್ದಾದರೆ, ಇನ್ನೊಂದು ನಿರ್ಮಿತಿ ಕೇಂದ್ರದ ಸಚಿನ್ ಅವರದ್ದಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಲ್ಪೆ ಪೊಲೀಸ್ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಪರಿಶೀಲಿಸಿ, ಸುದೇಶ್ ಅವರಿಗೆ ದೂರವಾಣಿ ಕರೆ ಮಾಡಿದಾಗ, ತಾನು ಸೈಂಟ್ ಮೇರೀಸ್ ದ್ವೀಪದಲ್ಲಿ ಇರುವುದನ್ನು ಸುದೇಶ್ ಒಪ್ಪಿಕೊಂಡಿದ್ದರು.
ತನ್ನೊಂದಿಗೆ ನಾಲ್ಕೈದು ಜನರಿದ್ದು, ದ್ವೀಪದಲ್ಲಿರುವ ಪರಿಕರಗಳನ್ನು ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು. ತಕ್ಷಣ ವಾಪಸ್ ಬರಲು ತಿಳಿಸಿದಾಗ ಕಡಲಿನ ಅಬ್ಬರ ಜೋರಾಗಿರುವ ಹಿನ್ನಲೆಯಲ್ಲಿ ಕಡಿಮೆ ಆದಾಗ ವಾಪಸ್ ಬರುವುದಾಗಿ ತಿಳಿಸಿದ್ದರು. ರಾತ್ರಿ 1ಗಂಟೆವರೆಗೆ ವಾಪಸ್ ಬರದಿರುವುದರಿಂದ ಕರಾವಳಿ ಕಾವಲು ಪೊಲೀಸ್ ಗಸ್ತು ಬೋಟ್ ಭಾರ್ಗವದಲ್ಲಿ ತೆರಳಿದ್ದು, ದ್ವೀಪದಲ್ಲಿ ತಂಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ 3.15ಕ್ಕೆ ಎಲ್ಲರನ್ನು ಅಲ್ಲಿಂದ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಗೆ ಕರೆತರಲಾಗಿದೆಎಂದು ಎಸ್ಪಿ ಪೊಲೀಸರು ತಿಳಿಸಿದ್ದಾರೆ.
ಅಭಿವೃದ್ದಿ ಸಮಿತಿ ಉಲ್ಲಂಘನೆಯ ಬಗ್ಗೆ ಮತ್ತು ಕೋವಿಡ್ ಲಾಕ್ ಡೌನ್ ಸಂದರ್ಭ ಅಲ್ಲಿ ತಂಗಿದ್ದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಆರ್ ತಿಳಿಸಿದ್ದಾರೆ.