ಮಂಗಳೂರು, ಮೇ 11 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ದ.ಕ. ಜಿಲ್ಲೆಯಲ್ಲೇ ಬಾಕಿಯಾಗಿದ್ದ ಕಾರ್ಮಿಕರಿಗೆ ರೈಲಿನ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಗುತ್ತಿದೆ. ಆದರೆ ಈ ಸಂದರ್ಭದಲ್ಲೂ ಎಲ್ಲಾ ಖರ್ಚಿನ ಹಣವನ್ನು ಜಿಲ್ಲಾಡಳಿತ ಕಾರ್ಮಿಕರಿಂದ ಸುಲಿಗೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಈಗಾಗಲೇ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಂದ ರೈಲು ಪ್ರಯಾಣ ದರ ವಿಧಿಸಲು ಮುಂದಾಗಿದ್ದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾದ ಕಾರಣ ರೈಲ್ವೇ ಇಲಾಖೆಯು ಶೇ.85 ರಷ್ಟು ಪ್ರಯಾಣ ದರದಲ್ಲಿ ವಿನಾಯಿತಿ ಹಾಗೂ ಶೇ. 15 ರಷ್ಟನ್ನು ರಾಜ್ಯ ಸರ್ಕಾರ ಪಾವತಿಸಲಿದೆ ಎಂದು ತಿಳಿಸಲಾಗಿತ್ತು. ಇದಕ್ಕಾಗಿ ರೈಲ್ವೇ ಇಲಾಖೆಯಿಂದ ಕೇಂದ್ರ ಸರ್ಕಾರ 150 ಕೋಟಿ ರೂ. ಪಡೆದಿದೆ. ಆದರೂ ಸರ್ಕಾರ ವಲಸೆ ಕಾರ್ಮಿಕರಿಂದ ಕೆಎಸ್ಆರ್ಟಿಸಿ ಬಸ್ಗೆ 40 ರೂ. ಹಾಗೂ ರೈಲು ಪ್ರಯಾಣಕ್ಕೆ 960 ರೂ. ಪಡೆಯಲಾಗಿದೆ ಎಂದು ದೂರಿದ್ದಾರೆ.
ಜಿಲ್ಲಾಡಳಿತವು ಕಾರ್ಮಿಕರನ್ನು ಕಳುಹಿಸಿಕೊಡುವ ಸಂದರ್ಭದಲ್ಲಿ ಸರ್ಕಾರದ ಯಾವ ನಿರ್ದೇಶನವನ್ನೂ ಪಾಲಿಸದೇ ಕಾರ್ಮಿಕರನ್ನು ಯಾವುದೇ ಭದ್ರತೆ ಇಲ್ಲದೆ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ. ಸೇವಾ ಸಿಂಧೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಆದೇಶಿಸಿದೆ. ಆದರೆ ಜಿಲ್ಲಾಡಳಿತ ಸರ್ಕಾರದ ಯಾವ ನಿರ್ಧಾರವನ್ನೂ ಪಾಲಿಸಿಲ್ಲ. ರೈಲ್ವೇ ನಿಲ್ದಾಣದಲ್ಲಿ ಜಿಲ್ಲಾಡಳಿತ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಗೆಯೇ ಹಣ ಪಡೆಯಲು ಆದೇಶವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು ಆದರೆ ಯಾರು ಆದೇಶ ನೀಡಿದ್ದಾರೆ ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ ಎಂದು ಎಂದು ಐವನ್ ಹೇಳಿದ್ದಾರೆ.
ಎಲ್ಲಾ ಕಾರ್ಮಿಕರಿಂದ ಊಟ ತಿಂಡಿ ಪ್ರಯಾಣದ ಹಣವನ್ನು ಪಡೆದಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಸಂಸದರು ಎಲ್ಲಿದ್ದಾರೆ. ಅವರು ಈ ಸಂದರ್ಭದಲ್ಲಿ ಧ್ವನಿ ಎತ್ತಬೇಕು. ಅಂಸಘಟಿತ ಕಾರ್ಮಿಕರ ಧ್ವನಿಯಾಗಬೇಕು ಎಂದು ಐವನ್ ಡಿಸೋಜ ಹೇಳಿದ್ದಾರೆ.