ಮಂಗಳೂರು, ಮೇ 11 (DaijiworldNews/PY) : ಕಮಿಷನರೇಟ್ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಲ್ಲಲ್ಲಿ ಅಕ್ರಮ ಗೋಹತ್ಯೆ, ಪ್ರಾಣಿಹತ್ಯೆಗಳು ನಡೆಯುತ್ತಿರುವುದು ನಿನ್ನೆ ನಡೆದ ಘಟನೆಯಿಂದ ಸಾಬೀತಾಗಿದ್ದು, ಈ ಬಗ್ಗೆ ಕಾನೂನಿನನ್ವಯ ತನಿಖೆ ನಡೆಯುವಂತೆ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಅಕ್ರಮ ಕಸಾಯಿಖಾನೆಗಳಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಹಲವಾರು ದೂರುಗಳನ್ನು ಈಗಾಗಲೇ ತಮ್ಮ ಇಲಾಖೆಗೆ ಕೊಟ್ಟಿರುತ್ತಾರೆ.
ಮುಲ್ಕಿ ಠಾಣಾ ವ್ಯಾಪ್ತಿಯ ಪುನರೂರು ಬಳಿಯ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ಮಾಡಿದಾಗ ವಧೆಗಾಗಿ ಇರಿಸಲಾದ ಜಾನವಾರುಗಳನ್ನು ವಶಪಡಿಸಲಾಗಿದ್ದು, ಈ ಅಕ್ರಮ ಕಸಾಯಿಖಾನೆಯು ಸಕ್ರಿಯವಾಗಿರುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ.
ಈ ಅಕ್ರಮ ಕಸಾಯಿಖಾನೆಗೆ ಕಾನೂನು ಬಾಹಿರವಾಗಿ ನೀಡಿದವರನ್ನು, ಅದರಲ್ಲಿ ಭಾಗಿಯಾಗಿರುವವರನ್ನು ಹಾಗೂ ಸ್ಥಳದಲ್ಲಿ ವಧೆಗೆ ಬಳಸಲಾಗುವ ವಸ್ತುಗಳನ್ನು ಮಹಜರು ಮಾಡಿ, ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಸೂಚಿಸಿದ್ದಾರೆ.