ಬೆಳ್ತಂಗಡಿ, ಮೇ 11 (DaijiworldNews/PY) : ಇಡೀ ದೇಶ ಕೊರೊನಾದ ವಿರುದ್ಧ ಹೋರಾಡುತ್ತಿದ್ದರೆ, ಇಲ್ಲೊಂದು ಗ್ರಾ.ಪಂ.ಸದಸ್ಯರು ಅಧಿಕಾರಕ್ಕಾಗಿ ಚಿಂತಿಸುತ್ತಿದ್ದಾರೆ. ವೇಣೂರು ಗ್ರಾ.ಪಂ. ಆಡಳಿತ ಮಂಡಳಿ ಪಂ.ಅಧ್ಯಕ್ಷೆಯ ಮೇಲೆ ಅವಿಶ್ವಾಸ ತಾಳಿದ ವಿದ್ಯಮಾನ ಸೋಮವಾರ ನಡೆದಿದ್ದು, ವೇಣೂರು ಗ್ರಾಮ ಪಂಚಾಯತ್ನ ಆಡಳಿತ ವ್ಯವಸ್ಥೆಗೆ ಸಂಬಂಧಿಸಿ ಭಾರೀ ರಾಜಕೀಯ ಬೆಳವಣಿಗೆಯೊಂದು ನಡೆದುಹೋಗಿದೆ.
ವೇಣೂರು ಗ್ರಾಮ ಪಂಚಾಯತ್ನ ಅಧ್ಯಕ್ಷೆ ಮೋಹಿನಿ ವಿಶ್ವನಾಥ ಶೆಟ್ಟಿ ಅವರ ಆಡಳಿತ ವ್ಯವಸ್ಥೆಯಿಂದ ಬೇಸತ್ತಿರುವ ಗ್ರಾ.ಪಂ.ನ ಎಲ್ಲಾ 23 ಸದಸ್ಯರು ಪುತ್ತೂರು ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್ ಅವರಿಗೆ ಅವಿಶ್ವಾಸ ಗೊತ್ತುವಳಿ ಮಂಡನೆ ಅರ್ಜಿ ಸಲ್ಲಿಸಿದ್ದು, ಇದೀಗ ಶೆಟ್ಟಿ ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಂತಾಗಿದೆ.
2016ರಲ್ಲಿ ನಡೆದ ವೇಣೂರು ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 14 ಮಂದಿ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ 10 ಮಂದಿ ಸದಸ್ಯರು ಚುನಾಯಿತರಾಗಿದ್ದರು. ಹಿಂದುಳಿದ ವರ್ಗ ಬಿ. ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದ ಕಾರಣ ಬಿಜೆಪಿ ಬೆಂಬಲಿತ ಸದಸ್ಯೆ ಮೋಹಿನಿ ವಿಶ್ವನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಈ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ- ಕಾಂಗ್ರೆಸ್ ಬೆಂಬಲಿತರು ಒಟ್ಟಾಗಿರುವುದು ಕುತೂಹಲ ಮೂಡಿಸಿದೆ.
ಅವಿಶ್ವಾಸ ಮಂಡನೆಯ ಅರ್ಜಿ ನೀಡಲು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸದಸ್ಯರಾದ ಲೋಕಯ್ಯ ಪೂಜಾರಿ, ರಾಜೇಶ್ ಪೂಜಾರಿ ಮೂಡುಕೋಡಿ, ಯಶೋಧರ ಹೆಗ್ಡೆ, ಹರೀಶ್ ಪಿ.ಎಸ್, ಲಕ್ಷ್ಣ ಪೂಜಾರಿ, ರೊನಾಲ್ಡ್ ಡಿಸೋಜ, ಗ್ರಾ.ಪಂ. ನೀರು ಮತ್ತು ನೈರ್ಮಲ್ಯ ಸಮಿತಿಯ ಅನೂಪ್ ಜೆ. ಪಾಯಸ್ ತೆರಳಿದ್ದರು.