ಬೆಳ್ತಂಗಡಿ, ಮೇ 11 (DaijiworldNews/PY) : ಇಲ್ಲಿನ ನ.ಪಂ.ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಗೂಡಂಗಡಿ ಹಾಗೂ ಹಣ್ಣುಹಂಪಲು ಮಾರಾಟ ಅಂಗಡಿಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತೆರವುಗೊಳಿಸುವಂತೆ ಕಳೆದ ಕೆಲ ದಿನಗಳಿಂದ ಸೂಚನೆ ನೀಡಿದ್ದರೂ ತೆರವುಗೊಳಿಸದೇ ಇದ್ದ ಕಾರಣ ಭಾನುವಾರ ರಾತ್ರಿ ನ.ಪಂ. ಸಿಬ್ಬಂದಿಗಳು ತಹಶೀಲ್ದಾರ್ ಉಪಸ್ಥಿತಿಯಲ್ಲಿ ತೆರವುಗೊಳಿಸಿದ್ದರು.
ಏಕಾಏಕಿ ಗೂಡಂಗಡಿ ತೆರವುಗೊಳಿಸುವ ಮೂಲಕ ನ.ಪಂ. ನವರು ವ್ಯಾಪರಸ್ಥರನ್ನು ಸಂಕಷ್ಟದ ಸಮಯದಲ್ಲಿ ಬೀದಿಗೆ ತಳ್ಳುವ ಕೆಲಸ ಮಾಡಿದೆ ಎಂದು ಆರೋಪಿಸಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ವ್ಯಾಪಾರಸ್ಥರು ಸೋಮವಾರ ನ.ಪಂ. ಮುಂದೆ ಧರಣಿ ನಡೆಸಿದರು.
ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದಲೂ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದ ಗೂಡಂಗಡಿಗಳನ್ನು ನ.ಪಂ. ಮುಖ್ಯಾಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ. ತೆರವುಗೊಳಿಸಿದರೆ ಎಲ್ಲವನ್ನೂ ತೆರವುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ.ಪಂ. ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಮಾತನಾಡಿ, ನಾವು ಕಾನೂನು ರೀತಿಯಲ್ಲೆ ತೆರವುಗೊಳಿಸಿದ್ದೇವೆ. ಈಗಾಗಲೆ ನ.ಪಂ. ವ್ಯಾಪ್ತಿಯಲ್ಲಿ 23 ಅನಧಿಕೃತ ಗೂಡಂಗಡಿಗಳಿವೆ. ಎಲ್ಲರಿಗೂ ತೆರವುಗೊಳಿಸಲು ಸೂಚನೆ ನೀಡಲಾಗುವುದು. ತಳ್ಳುಗಾಡಿಗಳ ಮೂಲಕ ಅಥವಾ ಸಂಚಾರಿ ವಾಹನದ ಮೂಲಕ ಹಣ್ಣು ಹಂಪಲು ಮಾರಾಟ ಮಾಡಬಹುದು. ನಿಯಮಾನುಸಾರ ವ್ಯಾಪಾರ ನಡೆಸದೇ ಹೋದಲ್ಲಿ ಎಲ್ಲಾ ಅಂಗಡಿ ತೆರವುಗೊಳಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಉಭಯ ಘಟಕದ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿ, ರಂಜನ್ ಜಿ.ಗೌಡ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ನ.ಪಂ. ಸದಸ್ಯರಾದ ಜಗದೀಶ ಡಿ, ಮುಸ್ತರ್ಜಾನ್ ಮೆಹಬೂಬ್, ಜನಾರ್ದನ, ರಾಮಚಂದ್ರ ಗೌಡ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ತಾ. ಅಧ್ಯಕ್ಷ ಅಶ್ರಫ್ ನೆರಿಯ, ತಾ.ಪಂ. ಸದಸ್ಯ ಪ್ರವೀಣ್ ಕುಮಾರ್, ನ.ಪಂ. ಮಾಜಿ ನಾಮನಿರ್ದೇಶಿತ ಸದಸ್ಯ ಶಂಕರ ಹೆಗ್ಡೆ, ಕೆ.ಪಿ.ಸಿ.ಸಿ. ಸದಸ್ಯ ರಾಮಚಂದ್ರ ಗೌಡ, ಕಾಂಗ್ರೆಸ್ ಎಸ್.ಸಿ ಘಟಕ ಅಧ್ಯಕ್ಷ ವಸಂತ ಬಿ.ಕೆ, ಚಂದು ಎಲ್, ಶರತ್,ಕಿ ಶೋರ್ ಕುಮಾರ್ ವಳಂಬ್ರ, ಮೊದಲಾದವರು ಇದ್ದರು.