ಮಂಗಳೂರು, ಮೇ 12 (Daijiworld News/MSP): ಅನಿವಾಸಿ ಭಾರತೀಯರ ನೆರವಿಗಾಗಿ ಮೇ 7 ರಂದು ಪ್ರಾರಂಭವಾದ ವಂದೇ ಭಾರತ್ ಮಿಷನ್ನ ಮೊದಲ ಹಂತದಲ್ಲಿ ಇಂದು ದುಬೈನಿಂದ ಮಂಗಳೂರಿಗೆ ೧೭೭ ಮಂದಿ ಕನ್ನಡಿಗರಿರುವ ವಿಮಾನ ರಾತ್ರಿ 10 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ನಿರೀಕ್ಷೆಯ ಬೆನ್ನಲ್ಲೇ ದೋಹಾ ಮತ್ತು ಮಸ್ಕತ್ ನಲ್ಲಿ ನೆಲೆಸಿರುವ ಕನ್ನಡಿಗರಿಗೂ ಏರ್ ಇಂಡಿಯಾ ಸಿಹಿ ಸುದ್ದಿ ನೀಡಿದೆ.
ಏರ್ ಇಂಡಿಯಾದ ಮೂಲಗಳ ಪ್ರಕಾರ ಮಸ್ಕತ್ನಿಂದ ಮೇ 20 ರಂದು ಬೆಂಗಳೂರು ಮೂಲಕ ವಿಮಾನ ಹಾರಾಟ ನಡೆಯಲಿದೆ. ವಿಮಾನವು ಸ್ಥಳೀಯ ಸಮಯ 1: 15 ಕ್ಕೆ ಮಸ್ಕತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 6: 15 ಕ್ಕೆ ಬೆಂಗಳೂರಿಗೆ ತಲುಪಲಿದೆ. ಆ ಬಳಿಕ ವಿಮಾನವು ಬೆಂಗಳೂರಿನಿಂದ 7: 15 ಕ್ಕೆ ಹೊರಡಲಿದ್ದು, ರಾತ್ರಿ 8: 10 ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ.
ಇನ್ನು ದೋಹಾದಿಂದ ಮೇ 22 ರಂದು ಏರ್ ಇಂಡಿಯಾ ವಿಮಾನ ಹಾರಾಟ ನಡೆಸಲಿದ್ದು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ . ದೋಹಾದಿಂದ ವಿಮಾನ ನಿರ್ಗಮನ ಸ್ಥಳೀಯ ಸಮಯ ಮಧ್ಯಾಹ್ನ 1: 30 ಆಗಿರಲಿದ್ದು, ರಾತ್ರಿ 8 ಗಂಟೆಗೆ ಬೆಂಗಳೂರು ತಲುಪಲಿದೆ. ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 9: 35 ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ. ಮುಂದಿನ ವಾರದಲ್ಲಿ ದುಬೈನಿಂದ ಎರಡನೇ ಹಾರಾಟದ ಸಾಧ್ಯತೆಗಳಿವೆ ಎಂದು ಮೂಲಗಳು ಬಹಿರಂಗಪಡಿಸಿವೆ.