ಮಂಗಳೂರು, ಮೇ 12 (Daijiworld News/MSP): ಲಾಕ್ ಡೌನ್ ಸಮಸ್ಯೆಯಿಂದ ಕಂಗೆಟ್ಟ ಜನರಿಗೆ ಈ ಬಾರಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ದುಬಾರಿ ಬಿಲ್ ಮತ್ತೊಂದು ಶಾಕ್ ನೀಡಿದೆ. ಜನರಿಗೆ ಸೂಕ್ತ ಮಾಹಿತಿ ಇಲ್ಲದೆ ಗೊಂದಲಕ್ಕೆ ಒಳಗಾಗಿದ್ದು ಇದನ್ನು ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ನಿಯೋಗ ಇಂದು ಮೆಸ್ಕಾಂ ಎಂಡಿ ಸ್ನೇಹಲ್ ಆರ್ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವರಾದ ಯು.ಟಿ ಖಾದರ್ ಮತ್ತು ಅಭಯಚಂದ್ರ ಜೈನ್ ಅವರು ಮೆಸ್ಕಾಂ ಎಮ್ ಡಿ ಅವರನ್ನು ಭೇಟಿ ವಿದ್ಯುತ್ ಬಿಲ್ ದುಪ್ಪಟ್ಟಿನಿಂದಾದ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು.
ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಸರಕಾರದಿಂದ ಯಾವುದೇ ಸೂಚನೆಯೂ ಬಂದಿಲ್ಲ ಆದರೆ ಬಿಲ್ ಪಾವತಿಗೆ ಕೆಲಕಾಲ ಕಾಲಾವಕಾಶ ನೀಡಿದೆ. ಏಪ್ರಿಲ್ ತಿಂಗಳಿನಲ್ಲಿ ಜಾರಿ ಮಾಡುವ ವಿದ್ಯುತ್ ಬಿಲ್ ಸರಾಸರಿ ಆಧಾರದ ಪ್ರಕಾರ ಮಾಡಲಾಗುತ್ತದೆ ಎಂದು ಎಮ್ ಡಿ ಸ್ನೇಹಲ್ ಆರ್ ಹೇಳಿದರು.ಸರಾಸರಿ ಬಳಕೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಮೇ ತಿಂಗಳ ತಿಂಗಳ ಬಿಲ್ ನಲ್ಲಿಸರಿಪಡಿಸಲಾಗುತ್ತದೆ ಮಾತ್ರವಲ್ಲದೆ ಜಿಲ್ಲೆಯಲ್ಲಿ ಸಬ್ ಡಿವಿಷನ್ ಅಧಿಕಾರಿಗಳ ನೇಮಕ ಮಾಡಿ ಜನರ ಸಮಸ್ಯೆಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು, ವಿದ್ಯುತ್
ಬಿಲ್ ಸಮಸ್ಯೆ ಆಗಿರುವಂತಹ ಗ್ರಾಹಕರು ಈ ಅಧಿಕಾರಿಗಳನ್ನು ಭೇಟಿಯಾದರೆ ಅದನ್ನು ಸರಿಪಡಿಸಲಾಗುವುದು ಎಂಬ ಭರವಸೆಯನ್ನು ಇದೇ ವೇಳೆ ನೀಡಿದರು.