ಉಡುಪಿ, ಮೇ 12 (Daijiworld News/MSP): ಜನಸಾಮಾನ್ಯರ ಬೇಡಿಕೆಯಂತೆ ಮೇ.13ರ ಬೆಳಗ್ಗೆಯಿಂದ ಉಡುಪಿ ಜಿಲ್ಲೆಯೊಳಗೆ ಒಂದಷ್ಟು ಖಾಸಗಿ ಹಾಗೂ ಕೆ ಎಸ್ ಆರ್ ಟಿ ಎಸ್ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಜನಸಾಮಾನ್ಯರ ಓಡಾಟದ ಅನುಕೂಲಕ್ಕಾಗಿ ಜಿಲ್ಲಾಡಳಿತ ಬಸ್ ಓಡಾಟಕ್ಕೆ ಅನುಮತಿ ನೀಡಿದ್ದು, 50 ಶೇಕಡಾಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಯಾವುದೇ ಬಸ್ ಗಳು ತುಂಬುವಂತಿಲ್ಲ. ಒಂದು ವೇಳೆ ಪ್ರಯಾಣದ ವೇಳೆ ಸಂಬಂಧಿಸಿದ ಬಸ್ ಈ ನಿಯಮ ಪಾಲಿಸದಿರುವುದು ಕಂಡುಬಂದರೆ ಹಾಗೂ ಹೆಚ್ಚಿನ ಪ್ರಯಾಣಿಕರನ್ನು ಸಾಗಾಟ ಮಾಡಿದರೆ ಅಂತವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಸಾರ್ವಜನಿಕರು , ಪ್ರಯಾಣಿಕರು ಕೂಡಾ ಕೋವಿಡ್ ಹರಡಂತೆ ಮುಂಜಾಗ್ರತಾ ಕ್ರಮ ಪಾಲಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರದ ಪಾಲನೆ ಮಾಡುವುದು ಮತ್ತು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹಾಗೆಂದು ಮುಖಗವಸುಗಳನ್ನು ತಲೆಯಲ್ಲಿ, ಅಥವಾ ಕುತ್ತಿಗೆಯಲ್ಲಿ ನೇತು ಹಾಕಿಕೊಂಡು ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದರೆ ಅಂತವರ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ