ಮಂಗಳೂರು, ಮೇ 12 (DaijiworldNews/SM): ವಿದೇಶಗಳಿಂದ ಬರುವವರಲ್ಲಿ ಯಾರಲ್ಲಾದರೂ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ನೇರವಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೊರ ರಾಜ್ಯಗಳಿಂದ ಅಥವಾ ಹೊರ ದೇಶಗಳಿಂದ ಆಗಮಿಸುವವರಲ್ಲಿ ಮೇಲ್ನೋಟಕ್ಕೆ ಕೊರೋನ ಸೋಂಕಿನ ಗುಣ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಈಗಾಗಲೇ ವಿದೇಶದಿಂದ ಬಂದವರಿಂದಲೇ ದೇಶದಲ್ಲಿ ಸೋಂಕು ಹರಡಿರುವುದು ದೇಶವೇ ಒಪ್ಪಿಕೊಂಡಿದೆ. ದಿನಗಳ ಹಿಂದೆ ಕೇರಳದಲ್ಲೂ ವಿದೇಶದಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದೆ.
ವಿದೇಶದಿಂದ ಬರುವವರನು ಯಾವುದೇ ಶಿಕ್ಷಣ ಸಂಸ್ಥೆ, ಹೊಟೇಲ್ಗಳಲ್ಲಿ ಕ್ವಾರಂಟೈನ್ಗೊಳಪಡಿಸುವ ಕುರಿತಂತೆ ಸಾರ್ವಜನಿಕರು ಗೊಂದಲಪಡುವ ಅಗತ್ಯವಿಲ್ಲ. ವಿದೇಶದಿಂದ ಬರುವವರಿಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಹೊರ ರಾಜ್ಯ, ದೇಶಗಳಿಂದ ಆಗಮಿಸುವವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.