ಮಂಗಳೂರು, ಮೇ 12 (DaijiworldNews/SM): ಕೊರೊನಾದಿಂದಾಗಿ ದುಬೈಯಲ್ಲಿ ಸಂಕಷ್ಟಕ್ಕೀಡಾದ ಕರಾವಳಿಗರನ್ನು ಹೊತ್ತು ಹೊರಟ ಮೊದಲ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಬಂದಿಳಿದಿದೆ. 38 ಗರ್ಭಿಣಿಯರು ಸಹಿತ 177 ಮಂದಿ ಕರಾವಳಿಗರು ಮಂಗಳೂರು ತಲುಪಿದ್ದಾರೆ.
ದೇಶವೇ ಲಾಕ್ ಡೌನ್ ಆದ ಬಳಿಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿಮಾನ ಇದಾಗಿದೆ. ಜಗತ್ತಿನೆಲ್ಲೆಡೆ ಕೊರೊನಾ ಸಂಕಟದಿಂದಾಗಿ ಭಾರತೀಯ ಮೂಲದವರು ಅದರಲ್ಲೂ ಕರಾವಳಿಯವರು ವಿವಿಧ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಅವರನ್ನು ಹಂತ ಹಂತವಾಗಿ ಕರೆ ತರುವ ಪ್ರಯತ್ನಿಗಳು ನಿರಂತರವಾಗಿ ನಡೆಸಲಾಗುತ್ತಿದೆ. ಇದೀಗ ದುಬೈನಲ್ಲಿ ಸಂಕಷ್ಟದಲ್ಲಿ ಕರಾವಳಿಗರನ್ನೊಳಗೊಂಡ ವಿಮಾನ ಮಂಗಳೂರು ತಲುಪಿದ್ದು, ಪ್ರಯಾಣಿಕರು ಮಂಗಳೂರಿನಲ್ಲಿ ಬಂದಿಳಿದಿದ್ದಾರೆ. ಇನ್ನು ಆಗಮಿಸಿದ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಪ್ರಮುಖಾಂಶಗಳು:
ಮಂಗಳೂರು ತಲುಪಿದ 177 ಮಂದಿ ಪ್ರಯಾಣಿಕರು
88 ಪುರುಷರು, 84 ಮಹಿಳೆಯರು ಆಗಮನ
5 ಮಂದಿ ಮಕ್ಕಳು
ಇಬ್ಬರು ಶಿಶುಗಳು
ಇನ್ನು ಆಗಮಿಸಿದವರಲ್ಲಿ ಪ್ರಮುಖವಾಗಿ 12 ಮಂದಿ ಮೆಡಿಕೆಲ್ ಎಮರ್ಜನ್ಸಿಯವರಾಗಿದ್ದಾರೆ. 38 ಮಂದಿ ಗರ್ಭಿಣಿಯರಾಗಿದ್ದಾರೆ. ಉಳಿದಂತೆ ಉದ್ಯೋಗ ಕಳೆದುಕೊಂಡವರು, ವಿಸಾ ಅವಧಿ ಮುಗಿದವರು, ಕೌಟುಂಬಿಕ ವೈದ್ಯಕೀಯ ಅಗತ್ಯತೆ ಹಿನ್ನೆಲೆ ಮಂಗಳೂರು ತಲುಪಿದ್ದಾರೆ.
ದುಬೈನಿಂದ ಆಗಮಿಸಿದ ವಿಮಾನ ರಾತ್ರಿ 10.10 ಕ್ಕೆ ಲ್ಯಾಂಡ್ ಆಗಿದೆ. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು.
ವಿಮಾನ ಆಗಮನ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ,ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.