ಮಂಗಳೂರು, ಮೇ 13 (Daijiworld News/MB) : ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪ ಸಂಪಾದಕಿ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು.
ಮೂಲತ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಕೋಡಿಯವರಾದ ಸೀತಾಲಕ್ಷ್ಮೀ ಅವರ ತಂದೆ ಹಿರಿಯ ಸಾಹಿತಿ ವಿ.ಗ. ನಾಯಕ ಶಿಕ್ಷಕ ವೃತ್ತಿ ಸೇರಿದ ಬಳಿಕ ದ.ಕ.ದ ಅಡ್ಯನಡ್ಕಕ್ಕೆ ಬಂದಿದ್ದರು. ಕಳೆದ ಹಲವು ವರ್ಷಗಳಿಂದ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು.
ಸೀತಾ ಲಕ್ಚ್ಮಿಅವರು ಅಡ್ಯನಡ್ಕದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಕನ್ನಡದಲ್ಲಿ ಎಂ ಎ ಮಾಡಿದರು. ಬಳಿಕ ಮಾಸ್ತಿಯವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ ಎಂದ ಮಹಾ ಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬೈ ವಿವಿ ಪಿಎಚ್ಡಿ ಪದವಿ ಪಡೆದಿದ್ದಾರೆ.
ಪರಾಮರ್ಶೆ, ಮುಕ್ತಮಾತು, ಬಿ.ವಿ.ಅರ್ತಿಕಜೆ, ರಂಗಕರ್ಮಿ ಸದಾನಂದ ಸುವರ್ಣ ಸಂಪದ ಮೊದಲಾದ ಕೃತಿಗಳನ್ನು ರಚಿಸಿದ್ದು ಸಾಹಿತ್ಯ ಲೋಕಕ್ಕೆ ಇವರ ಕೊಡುಗೆಗೆ ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ಜೆಡಿಎ ಪ್ರಶಸ್ತಿ ಲಭಿಸಿದೆ.