ಮಂಗಳೂರು, ಮೇ 13 (Daijiworld News/MB) : ಪೊಲೀಸ್ ಅಧಿಕಾರಿಗಳು, ಮಾಧ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಹೆಸರನ್ನು ಹೇಳಿ ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಕನಕ ವಾಟ್ಸಪ್ ಗ್ರೂಪ್ನ ಅಡ್ಮಿನ್ನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೆಳ್ತಂಗಡಿಯ ಪುತ್ತಿಲ ಗ್ರಾಮದ ಕುಂಡಡ್ಕ ಮನೆ ನಿವಾಸಿ ಅಬ್ದುಲ್ ರಶೀದ್ ಯಾನೆ ರಶೀದ್ ಕುಂಡಡ್ಕ (39) ಎಂದು ಗುರುತಿಸಲಾಗಿದೆ.
ಈತ ಕುಖ್ಯಾತ ರೌಡಿ ಹಾಗೂ ಜ್ಯುವೆಲ್ಲರಿ ದರೋಡೆ ಪ್ರಕರಣವೊಂದರಲ್ಲಿನ ಪ್ರಮುಖ ಆರೋಪಿ ಮುತ್ತಾಸಿಮ್ ಯಾನೆ ತಸ್ಲಿಂ ಎಂಬಾತನ ಕೊಲೆ ಪ್ರಕರಣದಲ್ಲಿರುವ ವ್ಯಕ್ತಿಯೊಬ್ಬನ ಹೆಸರನ್ನು ಪ್ರಕರಣದಿಂದ ತೆಗೆಸುತ್ತೇನೆ, ತನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿ 20 ಲಕ್ಷ ಹಣವನ್ನು ನೀಡುವಂತೆ ಬೇಡಿಕೆಯಿಟ್ಟು, ನಂತರ ರೂ 4 ಲಕ್ಷ ಹಣವನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಯ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿ ಅಬ್ದುಲ್ ರಶೀದ್ನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ.
ಈತನು "ಕನಕ" ಎಂಬ ವಾಟ್ಸ್ಅಪ್ ಗ್ರೂಪ್ ನ ಅಡ್ಮಿನ್ ಮಾಡಿದ್ದು, ಈ ವಾಟ್ಸಪ್ ಗ್ರೂಪ್ ನಲ್ಲಿ ಸರ್ಕಾರಿ ಅಧಿಕಾರಿಗಳನ್ನು, ರಾಜಕೀಯ ವ್ಯಕ್ತಿ, ಮಾಧ್ಯಮದವರನ್ನು ಸೇರಿಸಿಕೊಂಡು ನಂತರ ತನ್ನ ವಾಟ್ಸಪ್ ಗ್ರೂಪ್ ನ ಹೆಸರನ್ನು ನಮೂದಿಸಿ ಕರೆ ಮಾಡಿ ತನ್ನ ಪರಿಚಯವನ್ನು ಮಾಡಿಕೊಂಡು, ಆ ಪರಿಚಯವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ನಂಬಿಸಿ ಹಣವನ್ನು ಸುಲಿಗೆ ಮಾಡುತ್ತಿದ್ದನು. ಈತನ ವಿರುದ್ದ ಈ ಹಿಂದೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೇ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಕೂಡಾ ಇರುತ್ತದೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್, ಪಿಎಸ್ಐಯವರಾದ ಹೆಚ್ ಡಿ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ.