ಉಡುಪಿ, ಮಾ 17: ಮಾಧ್ಯಮಗಳಿಗೆ ವಿವಾದಿತ ಹೇಳಿಕೆ ನೀಡಿರುವ ಉಡುಪಿಯ ಶೀರೂರು ಶ್ರೀ ಲಕ್ಷ್ಮೇವರ ತೀರ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಹಿರಿಯ ಯತಿ ಪೇಜಾವರ ಶ್ರೀ ನಿರ್ಣಯ ಕೈಗೊಂಡಿದ್ದಾರೆ.
ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಯತಿ ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರು ಮಠ, ಎಂಟು ಯತಿಗಳ ತುರ್ತು ಗುಪ್ತ ಸಭೆ ನಡೆದಿದೆ. ಆದರೆ ಶೀರೂರು ಶ್ರೀಗಳ ವಿರುದ್ಧ ಸೂಕ್ತ ಕ್ರಮಕ್ಕೆ ಅಷ್ಟ ಯತಿಗಳು ಚರ್ಚಿಸಿ ಕೈಗೊಂಡಿರುವ ನಿರ್ಣಯವನ್ನು ಬಹಿರಂಗ ಪಡಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ನಿರಾಕರಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ವಿಡಿಯೋವೊಂದರಲ್ಲಿ ತಮಗೆ ಎಂಟನೇ ವಯಸ್ಸಲ್ಲಿ ಸನ್ಯಾಸ ಕೊಡುತ್ತಾರೆ. ಆಗ ತಮಗೆ ಬುದ್ಧಿ ಇರಲ್ಲ. ನಾವು ಜಗತ್ತು ಅಂದುಕೊಂಡಂಗೆ ಇಲ್ಲ. ನಮಗೂ ಆಸೆಗಳಿವೆ. ಹೀಗೆ ಅನೇಕ ವಿವಾದಿತ ಹೇಳಿಕೆಗಳನ್ನು ಶೀರೂರು ಶ್ರೀಗಳು ಸಂದರ್ಶನದಲ್ಲಿ ಹೇಳಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಇದು ನಕಲಿ ವೀಡಿಯೋ, ಧ್ವನಿ ನನ್ನದಲ್ಲ, ತಾನು ಆ ರೀತಿ ಹೇಳಿಯೇ ಇಲ್ಲ. ಕಾನೂನು ಕ್ರಮದ ಚಿಂತನೆ ನಡೆದಿದೆ. ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶೀರೂರು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಟಿವಿ ವಾಹಿನಿಯಲ್ಲಿ ಪ್ರಸಾರವಾದ ವಿವಾದಿತ ಹೇಳಿಕೆಗಳಿಂದ ಅಷ್ಟಮಠಗಳು ಹಾಗೂ ಯತಿಗಳ ಘನತೆ, ಗೌರವಕ್ಕೆ ಕುಂದುಂಟಾಗಿದ್ದು, ಈ ಹಿನ್ನೆಲೆ ಯತಿಗಳು ಗುಪ್ತ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ, ಸೂಕ್ತ ಕ್ರಮಕ್ಕೆ ನಿರ್ಣಯಿಸಿದ್ದಾರೆ.