ಮಂಗಳೂರು, ಮೇ 13 (Daijiworld News/MB) : ವಿದೇಶದಿಂದ ಮರಳಿದ ಪ್ರಯಾಣಿಕರಿಗೆ ದ.ಕ. ಜಿಲ್ಲಾಡಳಿತದಿಂದ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ವಿದೇಶದಿಂದ ಮರಳಿದ ಗರ್ಭಿಣಿಯರು, 10 ವರ್ಷಕ್ಕಿಂತ ಕೆಳಗಿನ ಮಕ್ಕಳು, 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಕೆಲವು ರೋಗಿಗಳಿಗೆ ಕೊರೊನಾ ವರದಿ ನೆಗೆಟಿವ್ ಬಂದಲ್ಲಿ ಮನೆಯಲ್ಲೇ ಕ್ವಾರಂಟೈನ್ಗೆ ಒಳಪಡಬಹುದು ಎಂದು ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ.
ದುಬೈನಲ್ಲಿ ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟದಲ್ಲಿದ್ದ ಕರಾವಳಿಗರನ್ನು ಮಂಗಳವಾರ ರಾತ್ರಿ ವಿಮಾನದ ಮೂಲಕದ ವಾಪಾಸ್ ಕರೆತರಲಾಗಿದ್ದು ಹಲವು ಪ್ರಯಾಣಿಕರು ಮಂಗಳೂರಿಗೆ ತಲುಪಿದ ಬಳಿಕ ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡಬೇಕಾದ ಸ್ಥಿತಿ ಉಂಟಾಗಿತ್ತು. ಹಾಗೆಯೇ ಊಟ, ನೀರಿಗೂ ವ್ಯವಸ್ಥೆ ಇರಲಿಲ್ಲ ಎಂದು ಆರೋಪಿಸಿದ್ದರು. ಈ ಕುರಿತಾಗಿ ದೈಜಿವರ್ಲ್ಡ್ ವಾಹಿನಿಗೆ ಕರೆ ಮಾಡಿದ್ದ ಗರ್ಭಿಣಿ ತನಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಆದ ತೊಂದರೆಗಳ ಬಗ್ಗೆ ಅಳಲು ತೋಡಿಕೊಂಡಿದ್ದು ಈ ವಿಡಿಯೋ ವೈರಲ್ ಆಗಿತ್ತು.
ಇದಾದ ಬಳಿಕ ಇದೀಗ ರಾಜ್ಯ ಸರ್ಕಾರ ವಿದೇಶದಿಂದ ಮರಳಿದ ಗರ್ಭಿಣಿಯರು, 10 ವರ್ಷಕ್ಕಿಂತ ಕೆಳಗಿನ ಮಕ್ಕಳು, 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಕ್ಯಾನ್ಸರ್ ಮೊದಲಾದ ರೋಗಿಗಳ ಕೊರೊನಾ ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದಲ್ಲಿ ಅವರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರಿಸಬಹುದು ಎಂದು ತಿಳಿಸಿದೆ.
ಹಾಗೆಯೇ ಇವರೆಲ್ಲರಿಗೂ ಕ್ವಾರಂಟೈನ್ ಸೀಲ್ಗಳನ್ನು ಹಾಕಬೇಕು ಎಂದು ನಿರ್ದೇಶನ ನೀಡಿದೆ.