ಕಾಸರಗೋಡು, ಮೇ 13 (DaijiworldNews/SM): ಜಿಲ್ಲೆಯಲ್ಲಿ ಮೂರನೇ ಹಂತದ ಕೊರೋನ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ತಿಳಿಸಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೊರೊನಾ ನಿಯಂತ್ರಣ ಅವಲೋಕನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊರರಾಜ್ಯಗಳಿಂದ ತಲಪಾಡಿ ಚೆಕ್ ಪೋಸ್ಟ್ ಮೂಲಕ ಬರುವವರಿಗೆ ಪಾಸ್ ಕಡ್ಡಾಯವಾಗಿದೆ. ಗರ್ಭಿಣಿಯರು, ಮಕ್ಕಳು, ರೋಗಿಗಳು , ವೃದ್ದರು, ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಇದರ ಹೊಣೆಯನ್ನು ಹೆಚ್ಚುವರಿ ದಂಡನಾಧಿಕಾರಿಗೆ ನೀಡಲಾಗಿದೆ. ಪಾಸ್ ಹೊಂದಿದವರು ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಕೇರಳಕ್ಕೆ ಪ್ರವೇಶಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರೈಲು ಮೂಲಕ ತಲಪುವವರ ತಪಾಸಣೆಗೆ ಕಾಲಿಕ್ಕಡವು ಮತ್ತು ತಲಪಾಡಿಯಲ್ಲಿ ತಪಾಸಣೆ ಹೆಚ್ಚಿಸಲಾಗುವುದು. ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕೊರೋನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಮೇ 15ರಂದು ಕಾಞ0ಗಾಡ್ ನಿಂದ 1480 ವಲಸೆ ಕಾರ್ಮಿಕರಿಗೆ ಉತ್ತರ ಪ್ರದೇಶಕ್ಕೆ ತೆರಳಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಸರಕಾರಿ ನೌಕರರನ್ನು ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯಕ್ಕೆ ಕರೆ ತರಲು ಕೆ ಎಸ್ ಆರ್ ಟಿ ಸಿ ಬಸ್ಸು ಸಂಚಾರ ನಡೆಸಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಉಪಜಿಲ್ಲಾಧಿಕಾರ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಲಯ ಕಂದಾಯಾಧಿಕಾರಿ ಅಹಮ್ಮದ್ ಕಬೀರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಎನ್.ಎಚ್.ಎಂ. ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್, ಪಂಚಾಯತ್ ಸಹಾಯಕ ನಿರ್ದೇಶಕ ರೆಜಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.