ಮಂಗಳೂರು, ಮಾ 17: ನಗರದಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಿದವರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಲಾಗುವುದು ಎಂದು ಟಿ.ಆರ್ ಸುರೇಶ್ ಎಚ್ಚರಿಸಿದ್ದಾರೆ.
ನಗರದಲ್ಲಿ ಮನಸಿಗೆ ಬಂದಂತೆ ಕಟೌಟ್, ಫ್ಲೆಕ್ಸ್, ಬ್ಯಾನರ್ ಹಾಕಿ ತೊಂದರೆ ನೀಡುತ್ತಿದ್ದಾರೆ. ಸಣ್ಣ ಸಣ್ಣ ಕಾರ್ಯಕ್ರಮಗಳಿಗೂ ಸಂಘಟಕರು ಫ್ಲೆಕ್ಸ್ ಅಳವಡಿಸುತ್ತಾರೆ. ಕೆಲವೊಮ್ಮೆ ಇದು ಗಲಾಟೆಗೆ ಕಾರಣವಾಗುತ್ತದೆ ಎಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರು ನೀಡಿದ್ದರು.
ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಅವರು, ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ಗಳ ಹಾವಳಿ ಹೆಚ್ಚಾಗಿದ್ದು ಈ ವಾರದಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದೆ. ಯಾವುದೇ ಅನುಮತಿ ಪಡೆಯದೇ ಪ್ಲಾಸ್ಟಿಕ್ ಫ್ಲೆಕ್ಸ್ ಹಾಕುವುದನ್ನು ನಿರ್ಬಂದಿಸಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಿರುವ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ಪಾಲಿಕೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.