ಮಂಗಳೂರು, ಮೇ 14 (Daijiworld News/MSP): ಕೊರೊನಾ ಕಾರಣದಿಂದಾಗಿ ಮಂಗಳೂರು ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟೀರಿಯಲ್ ತನಿಖಾ ವರದಿ ಸಲ್ಲಿಕೆ ಇನ್ನಷ್ಟು ವಿಳಂಬವಾಗಲಿದೆ.
ವರದಿ ಸಲ್ಲಿಕೆಗೆ ನೀಡಲಾಗಿದ್ದ ಗಡುವನ್ನು ವಿಸ್ತರಿಸುವಂತೆ ಈಗಾಗಲೇ ಮ್ಯಾಜಿಸ್ಟೀರಿಯಲ್ ತನಿಖೆಯ ಅಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಸರಕಾರವನ್ನು ಕೋರಿದ್ದಾರೆ.
2019 ರ ಡಿ.19 ರಂದು ಗೋಲಿಬಾರ್ ನಡೆದಿದ್ದು ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ತನಿಖಾ ಆಯೋಗ ರಚನೆಗೊಂಡು ಮಾ.24 ಕ್ಕೆ ಮೂರು ತಿಂಗಳು ಕಳೆದಿದೆ. ತನಿಖೆಯ ಮಧ್ಯಾಂತರ ವರದಿ ಸಲ್ಲಿಸಲಾಗಿದೆ. ಮಾ.15 ರ ಬಳಿಕ ರಾಜ್ಯದಲ್ಲಿ ಕೊರೊನ ಬಾಧೆ ಆರಂಭಗೊಂಡಿದ್ದರಿಂದ ವಿಚಾರಣೆ ಕೂಡಾ ಪೂರ್ತಿಯಾಗಿ ನಡೆದಿಲ್ಲ. ಮಾ.23ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮಂಗಳೂರು ಸಹಾಯಕ ಆಯುಕ್ತರು ಹಾಗೂ ಗೋಲಿಬಾರ್ ನಲ್ಲಿ ಸಾವನ್ನಪ್ಪಿದವರ ಮರಣೋತ್ತರ ಪರೀಕ್ಷೆ ನಡೆಸಿದ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಸುಮಾರು 30 ಜನ ಪೊಲೀಸರ ಹೇಳಿಕೆ ಪಡೆಯಲು ದಿನಾಂಕ ನಿಗದಿಯಾಗಿತ್ತು. ಆದರೆ ಲಾಕ್ ಡೌನ್ ನಿಮಿತ್ತ ಈ ಕಲಾಪ ಇನ್ನೂ ಪೂರ್ಣಗೊಂಡಿಲ್ಲ