ಮಂಗಳೂರು, ಮೇ 14 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲಾಗುತ್ತಿದ್ದು ವಿದೇಶದದಿಂದ ಬಂದವರನ್ನು ಕ್ವಾರಂಟೈನ್ಗೆ ಒಳಪಡಿಸಲು ಜಿಲ್ಲಾಡಳಿತ ಕೆಲವು ಕಡೆಗಳಲ್ಲಿ ವ್ಯವಸ್ಥೆ ಮಾಡಿದೆ. ಹಾಗೆಯೇ ಕೊಡಿಯಾಲ್ ಗುತ್ತು ಪರಿಸರದ ಹಾಸ್ಟೆಲ್ನಲ್ಲಿಯೂ ವ್ಯವಸ್ಥೆ ಮಾಡಲಾಗಿದ್ದು ಈ ಕಾರಣದಿಂದಾಗಿ ಜನರು ಮಾನವೀಯತೆ ಮರೆತು ಹಾಸ್ಟೆಲ್ ಬಳಿ ಸೇರಿ ವಿರೋಧ ವ್ಯಕ್ತಪಡಿಸಿ ಘಟನೆ ಮಂಗಳವಾರ ನಡೆದಿದೆ.
ಈ ಮೊದಲು ಕೊರೊನಾದಿಂದ ಮೃತಪಟ್ಟ ಮಹಿಳೆಯ ಶವಸಂಸ್ಕಾರದ ಸಂದರ್ಭದಲ್ಲೂ ಬುದ್ಧಿವಂತರ ಜಿಲ್ಲೆಯೆಂದೇ ಹೆಸರು ಪಡೆದಿರುವ ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ಜನರು ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ವಿದೇಶದಿಂದ ಬರುವ ಕರಾವಳಿಗರಿಗೆ ತಮ್ಮ ಸುತ್ತಲಿನ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಮಾನವೀಯತೆ ಮರೆತಿದ್ದಾರೆ.
ಲಾಕ್ಡೌನ್ನಿಂದಾಗಿ ದುಬೈನಲ್ಲಿ ಸಂಕಷ್ಟದಲ್ಲಿದ್ದ 177 ಮಂದಿ ಕರಾವಳಿಗರನ್ನು ಮಂಗಳವಾರ ರಾತ್ರಿ ಕರೆತರಲಾಗಿದ್ದು ಅವರನ್ನು 14 ದಿನಗಳ ಕ್ವಾರಂಟೈನ್ ವ್ಯವಸ್ಥೆಗಾಗಿ ಜಿಲ್ಲಾಡಳಿತ ಹಾಸ್ಟೆಲ್ ಹಾಗೂ ಹೊಟೇಲ್ಗಳನ್ನು ಕಾದಿರಿಸಿತ್ತು. ಕೊಡಿಯಾಲ್ ಗುತ್ತು ಪರಿಸರದ ಹಾಸ್ಟೆಲ್ನಲ್ಲಿಯೂ ಕ್ವಾರಂಟೈನ್ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವಿಚಾರ ತಿಳಿದಂತೆ ಸುಮಾರು 500 ಕ್ಕೂ ಅಧಿಕ ಸ್ಥಳೀಯರು ಸೇರಿ ವಿರೋಧ ವ್ಯಕ್ತಪಡಿಸಿದ್ದು ಕೊನೆಗೆ ಶಾಸಕ ಡಿ. ವೇದವ್ಯಾಸ ಕಾಮತ್ ಸ್ಥಳಕ್ಕಾಗಮಿಸಿ ಸ್ಥಳೀಯರಿಗೆ ವಿಷಯವನ್ನು ಮನವರಿಕೆ ಮಾಡಿದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಕೇಂದ್ರ ಗೃಹ ಮಂತ್ರಾಲಯ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸೋಂಕಿನ ಯಾವುದೇ ಲಕ್ಷಣವಿದ್ದರೆ ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಎಲ್ಲಾ ಪ್ರಯಾಣಿಕರು 14 ದಿನ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಕ್ವಾರಂಟೈನ್ನಲ್ಲಿ ಇರುವವರಿಂದ ಸೋಂಕು ಹರಡುವುದಿಲ್ಲ ಎಂದು ತಿಳಿಸಿದ್ದಾರೆ.