ಮಂಗಳೂರು,ಮೇ 14 (Daijiworld News/MSP): ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಊರುಗಳಿಗೆ ಹಿಂತಿರುಗುವ ಸರ್ಕಾರದ ನಿಯಮಗಳಿಗೆ ಅನುಸಾರ ಕ್ವಾರಂಟೇನ್ ಒಳಪಡಿಸಲಾಗುತ್ತದೆ. ಒಂದು ವೇಳೆ ಕ್ವಾರಂಟೇನ್ ಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿದ್ದವರು ತಮ್ಮ ತಮ್ಮ ಊರುಗಳಿಗೆ ಸರ್ಕಾರದ ನಿಯಮಗಳಿಗೆ ಒಳಪಟ್ಟು ಬರುತ್ತಿದ್ದು, ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಆಯಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆ ಯಾ ಇನ್ನಿತರೆ ಸಂಸ್ಥೆಗಳಲ್ಲಿ ಕ್ವಾರಂಟೈನ್ ನಲ್ಲಿಡುವ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಯಾರಿಂದಲಾದರೂ ಈ ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ಯಾ ತಡೆ ಉಂಟು ಮಾಡಿದಲ್ಲಿ ಅಂತವರ ವಿರುದ್ಧ ಸಾಂಕ್ರಾಮಿಕ ತಡೆ ಕಾಯ್ದೆ ಯ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಊರಿಗೆ ಬರುತ್ತಿರುವವರು ನಿಮ್ಮೂರಿನವರೇ ಆಗಿದ್ದು, ಎಲ್ಲರ ಹಿತದೃಷ್ಟಿಯಿಂದಲೇ ಜಿಲ್ಲಾಡಳಿತವು ಪ್ರತ್ಯೇಕವಾಗಿ ಅವರನ್ನು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲೇ ಇರಿಕೊಳ್ಳಬೇಕಾದ ನಿಯಮವಿದ್ದು, ಅವರನ್ನು ಕರೆತರುವ ಸಮಯ ಎಲ್ಲ ರೀತಿಯ ಆರೋಗ್ಯ ತಪಾಸಣೆ ಮಾಡಲಾಗಿರುತ್ತದೆ. ನಿಮ್ಮೆಲ್ಲರ ಹಿತದೃಷ್ಟಿಯಿಂದ ಕೇವಲ ನಿಗಾ ಇಡುವ ಸಲುವಾಗಿ ಕ್ವಾರಂಟೈನ್ ಮಾಡಲಾಗುತ್ತದೆಯೇ ಹೊರತು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಈ ಪ್ರಕ್ರಿಯೆಗೆ ಸಾರ್ವಜನಿಕರು ಸಹಕರಿಸಲು ಕೋರಿದೆ. ಜೊತೆಗೆ ಇದರ ವಿರುದ್ಧ ನಡೆಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.