ಕಾಸರಗೋಡು, ಮೇ 14 (DaijiworldNews/SM): ಜಿಲ್ಲೆಯಲ್ಲಿ ಗುರುವಾರ ಇಬ್ಬರು ಆರೋಗ್ಯ ಸಿಬ್ಬಂದಿ, ಜನಪ್ರತಿನಿಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಲ್ಲದೆ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಹತ್ತು ಮಂದಿಯಲ್ಲಿ ಕೊರೋನ ಸೋಂಕು ದ್ರಢಪಟ್ಟಿದ್ದು , ಮೂರನೇ ಹಂತದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಜಿಲ್ಲೆ ಸಂಪೂರ್ಣ ಕೊರೋನ ಮುಕ್ತವಾಗಿದ್ದರೂ ಇದೀಗ ಮೂರನೇ ಹಂತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸೋಂಕಿತರಲ್ಲಿ ಕಾಸರಗೋಡು ಜಿಲ್ಲಾಸ್ಪತ್ರೆ ಹಾಗೂ ಕಾಸರಗೋಡು ಜನರಲ್ ಆಸ್ಪತ್ರೆಯ ಸಿಬ್ಬಂದಿ ಒಳಗೊಂಡಿದ್ದಾರೆ.
ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು:
ಮೇ ನಾಲ್ಕರಂದು ಮುಂಬೈಯಿಂದ ಆಗಮಿಸಿದ ಪೈವಳಿಕೆ ನಿವಾಸಿಯನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಜನಪ್ರತಿನಿದಿಯಾದ ಅವರ ಪತ್ನಿ ಹಾಗೂ ಅವರ 11 ಮತ್ತು ಎಂಟು ವರ್ಷದ ಮಕ್ಕಳಲ್ಲಿ ಸೋಂಕು ದ್ರಢಪಟ್ಟಿದೆ. ತಲಪಾಡಿಗೆ ತಲಪಿದ್ದ ಸಂಬಂಧಿಕನನ್ನು ಕರೆದುಕೊಂಡು ಬಂದಿದ್ದು, ಮುಂಬೈಯಿಂದ ಬಂದಿದ್ದ ವ್ಯಕ್ತಿಗೆ ಎರಡು ದಿನಗಳ ಹಿಂದೆ ಸೋಂಕು ದ್ರಢಪಟ್ಟಿತ್ತು. ಇದೀಗ ಅವರನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿಯ ಮನೆಯ ನಾಲ್ವರಿಗೂ ಸೋಂಕು ದೃಢಪಟ್ಟಿದೆ.
ಸಾಮಾಜಿಕ ಕಾರ್ಯಕರ್ತ, ಜನಪ್ರತಿನಿಧಿಗೆ ಸೋಂಕು ಜನರಲ್ಲಿ ಆತಂಕ:
ಸಾಮಾಜಿಕ ಕಾರ್ಯಕರ್ತ ಹಲವು ಕಡೆಗಳಿಗೆ ತೆರಳಿದ್ದು, ಹಲವರನ್ನು ಸಂಪರ್ಕಿಸಿದ್ದಾರೆ. ಇದರಿಂದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ. ಇನ್ನು ಅವರ ಪತ್ನಿ ಜನಪ್ರತಿನಿಧಿಯಾಗಿರುವವರೂ ಕೂಡಾ ಹಲವರನ್ನು ಸಂಪರ್ಕಿಸಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ.
ಕುಂಬಳೆಯ ಇಬ್ಬರು, ಕಳ್ಳಾರ್ ನ ಓರ್ವ ಹಾಗೂ ಕಾಸರಗೋಡು ನಗರಸಭಾ ವ್ಯಾಪ್ತಿಯ ಓರ್ವನಲ್ಲಿ ಗುರುವಾರ ಸೋಂಕು ದ್ರಢಪಟ್ಟಿದೆ. ಇನ್ನು ಕಳ್ಳಾರ್ ನಿವಾಸಿ ಬೆಂಗಳೂರಿನಿಂದ ಬಂದವರು. ಜಿಲ್ಲೆಯಲ್ಲಿ ಒಟ್ಟು 1428 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 1211 ಮಂದಿ, 217 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಗುರುವಾರ 35 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 89 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 5215 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4928 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 47 ಮಂದಿಯ ಫಲಿತಾಂಶ ಲಭಿಸಬೇಕಿದೆ.