ಮಂಗಳೂರು, ಮೇ 14 (DaijiworldNews/SM): ದ.ಕ. ಜಿಲ್ಲೆಯಲ್ಲಿ ಗುರುವಾರದಂದು ಮತ್ತೋರ್ವ ಕೊರೊನಾ ಸೋಂಕಿತೆ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಪ್ಪಿನಂಗಡಿ ನಿವಾಸಿ 30 ವರ್ಷದ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದು, ಗುರುವಾರದಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಎಪ್ರಿಲ್ 18ರಂದು ಈ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎಪ್ರಿಲ್ 19ರಂದು ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿರಂತರ ಚಿಕಿತ್ಸೆಯ ಬಳಿಕ ಇದೀಗ ಮಹಿಳೆ ಗುಣಮುಖರಾಗಿದ್ದಾರೆ. ಮೇ 10 ಹಾಗೂ ಮೇ 13ರಂದು ಮಹಿಳೆಯ ಗಂಟಲ ದ್ರವವನ್ನು ಮತ್ತೆ ಪರೀಕ್ಷೆಗೆ ರವಾನಿಸಲಾಗಿತ್ತು. ಈ ಎರಡೂ ಪರೀಕ್ಷೆಗಳ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ದೆಹಲಿ ಪ್ರವಾಸ ಮುಗಿಸಿ ಆಗಮಿಸಿದ್ದ ಅವರ ಪತಿಯಿಂದ ಮಹಿಳೆಗೆ ಸೋಂಕು ಹರಡಿದೆ. ಈಗಾಗಲೇ ಪತಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ.
ಇನ್ನು ಸದ್ಯ ದ.ಕ. ಜಿಲ್ಲೆಯಲ್ಲಿ 13 ಆಕ್ಟಿವ್ ಪ್ರಕರಣಗಳಿವೆ. ಇಲ್ಲಿಯ ತನಕ ಜಿಲ್ಲೆಯ ಕೋವಿಡ್ ಆಸ್ಪತ್ರೆಯಿಂದ 16 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು ಖೇದಕರ ಸಂಗತಿಯೆಂದರೆ ಜಿಲ್ಲೆಯಲ್ಲಿ ಐವರನ್ನು ಕೊರೊನಾ ಬಲಿ ಪಡೆದುಕೊಂಡಿದೆ.