ಮಂಗಳೂರು, ಮೇ 15 (Daijiworld News/MSP): ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡನೇ ವಿಶೇಷ ವಿಮಾನ ಮೇ 18 ರ ಸೋಮವಾರ ನಿಗದಿಯಾಗಿದೆ. ಗರಿಷ್ಠ 177/180 ಸಾಮರ್ಥ್ಯ ಹೊಂದಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ಬಿ 737-800 ಎನ್ಜಿ ವಿಮಾನವು ಯುಎಇ ಸಮಯ ಮಧ್ಯಾಹ್ನ 13.30 ಕ್ಕೆ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಹೊರಟು ಮಂಗಳೂರಿಗೆ ಸ್ಥಳೀಯ ಸಮಯ ಮಧ್ಯಾಹ್ನ 18.30. ಆಗಮಿಸಲಿದೆ.
ಮೇ.12 ರ ಮೊದಲ ವಿಶೇಷ ವಿಮಾನ ಆಗಮನದ ಅವ್ಯವಸ್ಥೆಯ ನಂತರ, ದುಬೈನಿಂದ ಪ್ರಯಾಣಿಕರನ್ನು ವಿಶೇಷವಾಗಿ ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ವಿಶೇಷ ಅಥವಾ ತುರ್ತು ಅಗತ್ಯವಿರುವ ಪ್ರಯಾಣಿಕರನ್ನು ಸುಗಮವಾಗಿ ಸಾಗಿಸಲು ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ.
ಮೊದಲ ವಿಶೇಷ ವಿಮಾನದಲ್ಲಿ ಬಂದ ಇಬ್ಬರು ಗರ್ಭಿಣಿಯರು, ಮಂಗಳೂರು ವಿಮಾನ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ತಮ್ಮ ನೋವನ್ನು ದಾಯ್ಜಿವರ್ಲ್ಡ್ ಟಿವಿ ಲೈವ್ ಶೋನೊಂದಿಗೆ ಹಂಚಿಕೊಂಡ ವಿಡಿಯೋ ವೈರಲ್ ಆದ ನಂತರ, ವಿಶ್ವದೆಲ್ಲೆಡೆ ಇರುವ ಮಂಗಳೂರಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.
ಇದಾದ ಬಳಿಕ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ ರಾವ್ ಅವರು ಮಂಗಳೂರಿಗೆ ಬರುವ ಮುಂದಿನ ವಿಮಾನಗಳ ಬಗ್ಗೆ ಘಟನೆಗಳು ಪುನರಾವರ್ತನೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಮೂಲಗಳ ಪ್ರಕಾರ ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರು ಗುರುವಾರ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಇನ್ನು ಮುಂದೆ ಪ್ರಯಾಣಿಕರನ್ನು ಕರೆತರುವ ವೇಳೆ , ವಿಶೇಷವಾಗಿ ಅದರಲ್ಲೂ ಹಿರಿಯ ನಾಗರೀಕರು ಗರ್ಭಿಣಿಯರು ಯಾವುದೆ ಯಾವುದೇ ಅನಾನುಕೂಲತೆ ಉಂಟಾಗಬಾರದು ಎಂದು ಸೂಚನೆ ನೀಡಿದ್ದಾರೆ . ಮಾತ್ರವಲ್ಲದೆ ವಿಮಾನ ನಿಲ್ದಾಣದ ನಿರ್ದೇಶಕರು, ಪೊಲೀಸ್ ಆಯುಕ್ತರು ಮತ್ತು ಇತರ ಎಲ್ಲಾ ಉನ್ನತ ಅಧಿಕಾರಿಗಳು ವಿಮಾನ ಆಗಮಿಸುವ ವೇಳೆ ವಿಮಾನ ನಿಲ್ದಾಣದಲ್ಲಿ ಹಾಜರಿರಲು ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಇತರ ಕೊಲ್ಲಿ ರಾಷ್ಟ್ರಗಳಲ್ಲಿಂದ ಇನ್ನು ವಿಶೇಷ ವಿಮಾನಗಳ ನಿಗದಿಯಾಗದಿರುವುದರ ಬಗ್ಗೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಕರಾವಳಿ ಪ್ರದೇಶದ ಜನರಿಗೆ ನಿರಾಶೆ ಉಂಟಾಗಿದೆ. ಇದಕ್ಕೂ ಮೊದಲು ಏರ್ ಇಂಡಿಯಾ ಎಕ್ಸ್ಪ್ರೆಸ್ ಮಸ್ಕತ್ ಮತ್ತು ದೋಹಾದಿಂದ ಬೆಂಗಳೂರಿನ ಮೂಲಕ ಮಂಗಳೂರಿಗೆ ವಿಶೇಷ ವಿಮಾನಯಾನ ಘೋಷಿಸಿತ್ತು. ಆದರೆ ದಾಯ್ಜಿವಲ್ಡ್ ಲಭಿಸಿದ ಇತ್ತೀಚಿನ ವೇಳಾಪಟ್ಟಿಯ ಪ್ರಕಾರ, ಮಸ್ಕತ್ ಮತ್ತು ದೋಹಾ ವಿಮಾನಗಳು ಬೆಂಗಳೂರುವರೆಗೆ ಮಾತ್ರ ಹಾರಾಟ ನಡೆಸಲಿದೆ. ಅಲ್ಲದೆ ಮಂಗಳೂರು ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಿಲ್ಲ.
ಈ ವಿಷಯದ ಬಗ್ಗೆ ಸ್ಪಷ್ಟತೆ ಪಡೆಯಲು ದಾಯ್ಜಿವರ್ಲ್ಡ್, ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು , ಆದರೆ ದೋಹಾ ಮತ್ತು ಮಸ್ಕತ್ನ ರಾಯಭಾರ ಕಚೇರಿಗಳು ಮಂಗಳೂರಿಗೆ ವಿಮಾನಗಳನ್ನುಸೇವೆಗಳನ್ನು ಓದಗಿಸುವ ಬಗ್ಗೆ ಯವುದೇ ಪ್ರಯತ್ನ ನಡೆಸಿಲ್ಲ ಎಂದು ತಿಳಿದುಬಂದಿದೆ
ದಾಯ್ಜಿವರ್ಲ್ಡ್ ಜೊತೆ ಮಾತನಾಡಿದ ಮಾಜಿ ಎನ್ಆರ್ಐ ಸೆಲ್ ಮುಖ್ಯಸ್ಥ ಡಾ.ಆರತಿ ಕೃಷ್ಣ, ತಮ್ಮ ವೈಯಕ್ತಿಕ ಸಾಮರ್ಥ್ಯದ ಮೂಲಕ ಕೊಲ್ಲಿಯಲ್ಲಿರುವ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕಿಸಿ ವಿಮಾನ ಮಂಗಳೂರುವರೆಗೆ ಹಾರಾಟ ನಡೆಸಲು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಬೆಂಗಳೂರುವರೆಗೆ ವಿಮಾನ ಹಾರಾಟ ನಡೆಸಿದ್ರೆ, ಬೆಂಗಳೂರಿನಿಂದ ಮಂಗಳೂರಿಗೆ ಬಸ್ಸುಗಳನ್ನು ಓಡಿಸಲು ಅನುಮತಿ ಪಡೆಯುಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಆದರೆ, ಕುವೈತ್ ಮತ್ತು ಸೌದಿ ಅರೇಬಿಯಾದಿಂದ ಮಂಗಳೂರಿಗೆ ವಿಮಾನಗಳ ಹಾರಾಟ ನಡೆಸುವ ಇನ್ನೂ ಯಾವುದೇ ಮಾಹಿತಿ ಇಲ್ಲ. ಆದರೆ ಮುಂದಿನ ವಾರ ಸೌದಿ ಅರೇಬಿಯಾದಿಂದ ವಿಮಾನ ಹಾರಾಟ ನಡೆಸುವ ಸಾಧ್ಯತೆ ಇರುವ ಬಗ್ಗೆ ಎಂದು ಡಾ.ಆರತಿ ಕೃಷ್ಣ ಭರವಸೆ ನೀಡಿದ್ದಾರೆ.
ಈ ಸಂಬಂಧ ದಾಯ್ಜಿವರ್ಲ್ಡ್ , ಜಿಲ್ಲಾಡಳಿಯ ಏರ್ ಇಂಡಿಯಾ ಎಕ್ಸ್ಪ್ರೆಸ್, ಮತ್ತು ಅನಿವಾಸಿ ಭಾರತೀಯ ಡಾ.ಆರತಿ ಕೃಷ್ಣ ಹಾಗೂ ದುಬೈನಿಂದ ವಿಮಾನ ಹಾರಾಟ ವ್ಯವಸ್ಥೆ ಮಾಡಲು ಶ್ರಮಿಸಿದ್ದ ಪ್ರವೀಣ್ ಶೆಟ್ಟಿ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದು ಸೂಕ್ತ ಅನುಕೂಲ ಕಲ್ಪಿಸಲು ಪ್ರಯತ್ನಿಸುತ್ತಿದೆ.