ಮಂಗಳೂರು, ಮಾ 18 : ಆಳ್ವಾಸ್ ಕಾಲೇಜಿನ ಪುಷ್ಪಗಿರಿ ಹಾಸ್ಟೆಲ್ ನಲ್ಲಿ ವಾರ್ಡನ್ ಗಳು ವಿದ್ಯಾರ್ಥಿಗಳಿಗೆ ಲಾಠಿ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಇದೀಗ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ. ಮಾ 17 ರ ಶನಿವಾರ ಈ ಘಟನೆ ನಡೆದಿದ್ದು , ಸಿಬ್ಬಂದಿ ಕೃತ್ಯ ವಿರೋಧಿಸಿ ವಿದ್ಯಾರ್ಥಿಗಳು ಇಂದು ಬೆಳಗ್ಗಿನಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ. ರಾಜೇಶ್ ಎಂಬವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಕೊಠಡಿಗೆ ನುಗ್ಗಿದ್ದ ವಾರ್ಡನ್ ಗಳ ತಂಡ ಕ್ಷುಲಕ ಕಾರಣಕ್ಕೆ ಲಾಠಿ ಹಿಡಿದು ಸುಮಾರು 20ಕ್ಕಿಂತಲೂ ಹೆಚ್ವು ವಿದ್ಯಾರ್ಥಿಗಳ ಮೇಲೆ ತೀವ್ರವಾಗಿ ಥಳಿಸಿದ್ದಾರೆ ಎಂದು ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಥಳಿತಕ್ಕೆ ಒಳಗಾದ 20 ವಿದ್ಯಾಥಿಗಳ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಘಟನೆಯ ವಿವರ
ವಿದ್ಯಾರ್ಥಿಗಳು ನೀಡಿದ ಮಾಹಿತಿಯಂತೆ, ಪಿಯುಸಿ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಸೇರಿ ಸಂಭ್ರಮಾಚರಣೆಗಾಗಿ ಹಾಸ್ಟೆಲ್ ನ ಕ್ಯಾಂಟೀನ್ ಗೆ ತೆರಳಿದ್ದಾರೆ. ಅಲ್ಲಿ ಊಟ ಸರಿ ಇಲ್ಲವೆಂದು ಕ್ಯಾಂಟಿನ್ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಕೊಠಡಿಗೆ ಹಿಂದುರುಗಿದ್ದಾರೆ. ಆದರೆ ಕೆಲ ಸಮಯದ ಬಳಿಕ ಇದೇ ನೆಪ ಇಟ್ಟುಕೊಂಡು ಆಗಮಿಸಿದ ರಾಜೇಶ್ ಹಾಗೂ ತಂಡ ಹಿಡಿದು ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿತೊಡಗಿದ್ದಾರೆ. ಥಳಿಸುವ ವಿಡಿಯೋವನ್ನು ಸ್ವತಃ ವಿದ್ಯಾರ್ಥಿಗಳೇ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ, ಮಾಧ್ಯಮಕ್ಕೆ ನೀಡಿದ್ದಾರೆ. ಘಟನೆ ಬಗ್ಗೆ ವಿದ್ಯಾರ್ಥಿಗಳ ಹೆತ್ತವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.