ಮಂಗಳೂರು, ಮೇ 15 (DaijiworldNews/PY) : ಪಡೀಲ್ನ ಫಸ್ಟ್ ನ್ಯೂರೋ ಆಸ್ಪತ್ರೆ ಸೇರಿದಂತೆ ದ.ಕ ಜಿಲ್ಲೆಯ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಲು ಬೆಂಗಳೂರಿನಿಂದಲೂ ಪರಿಣತರ ತಂಡವನ್ನು ಕಳುಹಿಸಲು ಮುಂದಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ತಜ್ಞರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಹಾಗೂ ಸೋಂಕು ಎಲ್ಲಿಂದ ಶುರುವಾಗಿದೆ ಎಂಬುದನ್ನು ಕಂಡುಹಿಡಿಯಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡಲು ಪಡೀಲ್ನ ಆಸ್ಪತ್ರೆ ಹಾಗೂ ಬಂಟ್ವಾಳದ ಕಸಬಾ ಪ್ರದೇಶ ಕಾರಣವಾಗಿದ್ದು, ಈ ಎರಡು ಸ್ಥಳಗಳಿಂದ ಸೋಂಕು ಎಲ್ಲಿಂದ ಬಂದಿದೆ ಎನ್ನುವುದನ್ನು ಈವರೆಗೆ ಪತ್ತೆಹಚ್ಚಲಾಗಲಿಲ್ಲ. ಈ ಆಸ್ಪತ್ರೆಯ ಸಂಪರ್ಕದಿಂದ ದಕ್ಷಿಣ ಕನ್ನಡದಲ್ಲಿ 18, ಭಟ್ಕಳದಲ್ಲಿ 21 ಹಾಗೂ ಉಡುಪಿ ಜಿಲ್ಲೆಯಲ್ಲಿ ಎರಡು ಕೊರೊನಾ ಪ್ರಕರಣಗಳು ಸೇರಿ ಒಟ್ಟು 41 ಮಂದಿಗೆ ಕೊರೊನಾ ತಗುಲಿದೆ.
ಜಿಲ್ಲಾಡಳಿತ ನೇತೃತ್ವದ ತಂಡವು ಪರಿಶೀಲನೆ ನಡೆಸಿದ್ದು, ಸೋಂಕು ಮೂಲತಃ ಕೇರಳದಿಂದ ಹರಡಿರಬಹುದು ಎಂದು ಶಂಕಿಸಿದೆ. ಹೆಚ್ಚಿನ ತನಿಖೆಗಾಗಿ ಕೇರಳ ಸರ್ಕಾರದ ಕಡೆಯಿಂದ ಮಾಹಿತಿ ಪಡೆಯಬೇಕಾಗಿದೆ. ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ರಾಜ್ಯ ಸರ್ಕಾರ ಪತ್ರ ಬರೆದಿದೆ ಎನ್ನಲಾಗಿದೆ.
ಫೆ 1 ಹಾಗೂ ಎ 24 ರ ನಡುವೆ 1,606 ಹೊರರೋಗಿಗಳು ಮತ್ತು 612 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಎಲ್ಲಾ 2,218 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದರೆ, ಮೊದಲು ಸೋಂಕು ಎಲ್ಲಿಂದ ಪ್ರಾರಂಭವಾಯಿತು ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಿದೆ ಎಂದು ಹೇಳಲಾಗಿದೆ.
ಮೂರು ವಾರಗಳವರೆಗೂ ಕಾರ್ಯನಿರ್ವಹಿಸಿದ ನಂತರವೂ ಫಸ್ಟ್ ನ್ಯೂರೋ ಆಸ್ಪತ್ರೆ ಹಾಗೂ ಬಂಟ್ವಾಳದಿಂದ ಹರಡುತ್ತಿರುವ ಕೊರೊನಾ ವೈರಸ್ ಮೂಲವನ್ನು ಪತ್ತೆ ಹಚ್ಚಲು ತಂಡವು ವಿಫಲವಾದ ಕಾರಣ ಜನರು ಗೊಂದಲಕ್ಕೊಳಗಾಗಿದ್ದಾರೆ. ಹಾಗಾಗಿ ಪ್ರತಿಪಕ್ಷಗಳು ಉನ್ನತ ಮಟ್ಟದ ತನಿಖೆಗಾಗಿ ಒತ್ತಡ ಹೇರಿವೆ.
ಆದರೆ, ಕೊರೊನಾ ವೈರಸ್ನ ಮೂಲವನ್ನು ತನಿಖೆ ಮಾಡಲು ರಾಜ್ಯ ಮಟ್ಟದ ತಜ್ಞರ ತಂಡ ಇಲ್ಲಗೆ ಆಗಮಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಆದರೆ, ಕೊರೊನಾವೈರಸ್ ಸೋಂಕಿನ ಮೂಲವನ್ನು ತನಿಖೆ ಮಾಡಲು ರಾಜ್ಯ ಮಟ್ಟದ ತಜ್ಞರ ತಂಡ ಇಲ್ಲಿಗೆ ಆಗಮಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.